(ನ್ಯೂಸ್ ಕಡಬ) newskadaba.com,ಡಿ.31 ಬೆಂಗಳೂರು ಗ್ರಾಮಾಂತರ : ಸರಕಾರಿ, ಖಾಸಗಿ ಆಸ್ಪತ್ರೆಗಳಲ್ಲಿನ ಜನನ ಹಾಗೂ ಮರಣಕ್ಕೆ ಸಂಬಂಧಿಸಿದಂತೆ 21 ದಿನದೊಳಗೆ ಕಡ್ಡಾಯವಾಗಿ ನೋಂದಣಿ ಮಾಡಿ, ಸಂಬಂಧಿಸಿದವರಿಗೆ ಪ್ರಮಾಣ ಪತ್ರವನ್ನು ನೀಡಲು ಆರೋಗ್ಯ ಇಲಾಖೆ ಕ್ರಮವಹಿಸಿದೆ. ರಾಜ್ಯದಲ್ಲಿ 2025 ರಲ್ಲಿ ಒಟ್ಟು 9,22,992 ಜನನ ಹಾಗೂ 5,07,650 ಮರಣಕ್ಕೆ ಸಂಬಂಧಿಸಿದಂತೆ ನೋಂದಣಿಯಾಗಿದೆ.
ಇದರಲ್ಲಿ 21 ದಿನಗಳಲ್ಲಿ ಶೇ.79 ರಷ್ಟು ಮಾತ್ರ ಆಸ್ಪತ್ರೆಗಳಲ್ಲಿ ನೋಂದಣಿಯಾಗಿದೆ. ಉಳಿದಂತೆ ಕೆಲವು ಪ್ರಕರಣಗಳಲ್ಲಿ 30 ದಿನ , ಇನ್ನೂ ಕೆಲವು 31 ದಿನದಿಂದ 365 ದಿನಗಳಲ್ಲಿ, ಕೆಲವು ಪ್ರಕರಣಗಳಲ್ಲಿ365 ದಿನ ನಂತರ ಕೂಡ ನೋಂದಣಿಯಾಗಿರುವ ಉದಾಹರಣೆಗಳಿವೆ. ಇದರಿಂದ ಸಮರ್ಪಕವಾದ ಮಾಹಿತಿ ಲಭ್ಯವಾಗುತ್ತಿಲ್ಲ.
ಶೇ. 100ರಷ್ಟು ನೋಂದಣಿ ಕಡ್ಡಾಯ:
ಜನನ ಮತ್ತು ಮರಣ ಪ್ರಮಾಣ ನೋಂದಣಿ ಕಾಯಿದೆ 1969ರ 2023ರಲ್ಲಿನ ತಿದ್ದುಪಡಿ ಪ್ರಕಾರ ಜನನ,ಮರಣ ನೋಂದಣಿ ಕಡ್ಡಾಯವಾಗಿದೆ. ಜನರು ಸಾಕಷ್ಟು ಸೌಲಭ್ಯಗಳನ್ನು ಪಡೆಯಲು ಜನನ ಮತ್ತು ಮರಣ ಪ್ರಮಾಣ ಪತ್ರ ಅಗತ್ಯವಾಗಿದ್ದು, ಸೌಲಭ್ಯಗಳಿಂದ ವಂಚಿರಾಗುವ ಸಾಧ್ಯತೆ ಇದೆ. ಈ ಪ್ರಮಾಣ ಪತ್ರಗಳನ್ನು ಮತ್ತೆ ಪಡೆಯಲು ಸಾಕಷ್ಟು ಸಮಯ, ಹಣ ವ್ಯಯ ಮಾಡಬೇಕಾಗಲಿದೆ. ಈ ಸಮಸ್ಯೆಗಳನ್ನು ತಪ್ಪಿಸಲು ಪ್ರತಿಯೊಂದು ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿಕಡ್ಡಾಯವಾಗಿ 21 ದಿನದೊಳಗೆ ಈ ನೋಂದಣಿ ಕಾರ್ಯವನ್ನು ಮಾಡಿ, ಪ್ರಮಾಣ ಪತ್ರವನ್ನು ಆಯಾ ಕುಟುಂಬಗಳಿಗೆ ವಿತರಿಸುವ ನಿಟ್ಟಿನಲ್ಲಿಕೆಲಸ ಮಾಡಬೇಕಿದೆ.












