(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.06. ದರೋಡೆಗೈಯಲು ಹೊಂಚು ಹಾಕಿ ಕುಳಿತಿದ್ದ ಆರು ಮಂದಿ ಆರೋಪಿಗಳ ಪೈಕಿ ಇಬ್ಬರನ್ನು ಬಂಧಿಸಿರುವ ಬಂಟ್ವಾಳ ಗ್ರಾಮಾಂತರ ಪೊಲೀಸರು ಚಾಕು, ಕಬ್ಬಿಣದ ರಾಡ್ ಹಾಗೂ ಖಾರದ ಪುಡಿಯನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಗಳನ್ನು ಉಳ್ಳಾಲ ಮಿಲ್ಲತ್ ನಗರದ ಫಲಾಲ್ ಮಂಝಿಲ್ ನಿವಾಸಿ ಮಹಮ್ಮದ್ ಅರ್ಪಾಜ್(19) ಹಾಗೂ ಉಳ್ಳಾಲ ಮುಕ್ಕಚ್ಚೇರಿ ನಿವಾಸಿ ಮಹಮ್ಮದ್ ಸುಹೈಲ್(27) ಎಂದು ಗುರುತಿಸಲಾಗಿದೆ. ಶುಕ್ರವಾರ ತಡರಾತ್ರಿ ಫರಂಗಿಪೇಟೆ, ಮಾರಿಪಳ್ಳ ಪರಿಸರದಲ್ಲಿ ಗಸ್ತು ತಿರುಗುತ್ತಿದ್ದ ವೇಳೆ ರೊಟ್ಟಿಗುಡ್ಡೆ ಎಂಬಲ್ಲಿ ಆರು ಮಂದಿಯ ತಂಡವು ಪೊಲೀಸರನ್ನು ಕಂಡು ಓಡಿ ಹೋಗಲು ಯತ್ನಿಸಿದ್ದು, ಇಬ್ಬರು ಸೆರೆಸಿಕ್ಕಿದ್ದಾರೆ. ಬಂಧಿತರನ್ನು ವಿಚಾರಿಸಿದಾಗ ದರೋಡೆ ಕೃತ್ಯಕ್ಕೆ ಹೊಂಚು ಹಾಕಿ ಕುಳಿತಿರುವುದು ಬೆಳಕಿಗೆ ಬಂದಿದ್ದು, ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೋಲಿಸ್ ಠಾಣೆ ಅ.ಕ್ರ ಸಂಖ್ಯೆ 80/18 ಕಲಂ 399,402 ರಂತೆ ಪ್ರಕರಣ ದಾಖಲಾಗಿದೆ.
ಸುಹೈಲ್ ಮೇಲೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಒಂದು ಕೊಲೆ ಪ್ರಕರಣ ಮತ್ತು ಒಂದು ಕೊಲೆ ಯತ್ನ ಪ್ರಕರಣ ಹಾಗೂ ಮೊಹಮ್ಮದ್ ಅರ್ಫಾಜ್ ಮೇಲೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಎರಡು ಕೊಲೆ ಯತ್ನ ಪ್ರಕರಣಗಳು ಮತ್ತು ಬಂದರು ಠಾಣೆಯಲ್ಲಿ ಒಂದು ಸುಲಿಗೆ ಪ್ರಕರಣ ದಾಖಲಾಗಿರುತ್ತದೆ. ಪ್ರಕರಣದಲ್ಲಿ ತಪ್ಪಿಸಿಕೊಂಡಿರುವ ಆರೋಪಿಗಳ ಬಗ್ಗೆ ಮಾಹಿತಿ ಇದ್ದು ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ಅಧಿಕ್ಷರಾದ ರವಿಕಾಂತೆಗೌಡ IPS ತಿಳಿಸಿದ್ದಾರೆ.