(ನ್ಯೂಸ್ ಕಡಬ) newskadaba.com ಕಡಬ, ಮೇ.06. ಕಳೆದ ಹಲವು ವರ್ಷಗಳಿಂದ ಬೇಡಿಕೆಯಾದ ಪದವಿನಿಂದ ಕೆದ್ದೋಟೆ – ಇಡಾಳ – ಕುಂಟ್ಯಾನ ಮೂಲಕ ಕುಂತೂರಿಗೆ ಸಂಪರ್ಕ ಕಲ್ಪಿಸುವ ಗ್ರಾಮೀಣ ಕಚ್ಚಾ ರಸ್ತೆಯನ್ನು ದುರಸ್ಥಿ ಮಾಡದ ವಿಚಾರದಲ್ಲಿ ಇಡೀ ಗ್ರಾಮಸ್ಥರಿಗೆ ಚುನಾವಣೆಯ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಕೆದ್ದೋಟೆ ಶ್ರೀ ರಾಮ ಭಜನಾ ಮಂದಿರದಲ್ಲಿ ಗ್ರಾಮಸ್ಥರ ಸಭೆಯು ಶನಿವಾರ ನಡೆಯಿತು.
ಗ್ರಾಮೀಣ ಯುವಕರು ರಸ್ತೆ ಅಭಿವೃದ್ಧಿಯ ವಿಚಾರದಲ್ಲಿ ವಾಟ್ಸಪ್ ಗ್ರೂಪ್ ರಚಿಸಿಕೊಂಡು ಚರ್ಚಿಸಿ ಕೊನೆಗೆ ಶನಿವಾರ ರಾತ್ರಿ ಸಭೆ ಕರೆದಿದ್ದರು. ಸಭೆಯಲ್ಲಿ ಗ್ರಾಮಸ್ಥರು ಭಾಗವಹಿಸಿ ಚರ್ಚಿಸಿ, ವಿಧಾನಸಭಾ ಚುನಾವಣೆ ಮುಗಿದ ಬಳಿಕ ಜಿಲ್ಲಾ ಪಂಚಾಯತ್ ಸದಸ್ಯರಿಗೆ ಈ ಕುರಿತು ಒಂದು ಮನವಿಯನ್ನು ಮಾಡಿ ಮುಂದಿನ ಲೋಕಸಭಾ ಚುನಾವಣೆಯ ಮೊದಲು ಅದಕ್ಕೆ ಒಂದು ಪರಿಹಾರವನ್ನು ಒದಗಿಸಬೇಕು. ಇಲ್ಲದಿದ್ದಲ್ಲಿ ಮುಂಬರುವ ಎಲ್ಲಾ ಚುನಾವಣೆಯಲ್ಲಿ ಸಮಸ್ತ ಗ್ರಾಮಸ್ಥರು ಚುನಾವಣೆ ಬಹಿಷ್ಕಾರ / ನೋಟಾ ಮತದಾನ ಮಾಡುವುದಾಗಿ ನಿರ್ದರಿಸಿದರು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಯುವ ಮುಂದಾಳುಗಳಾದ ಗಣೇಶ್ ಹಾಗು ಯೋಗೀಶ್, ನಮ್ಮ ಪದವಿನಿಂದ ಕೆದ್ದೋಟೆ ಇಡಾಳ ಕುಂಟ್ಯಾನ ಮೂಲಕ ಕುಂತೂರಿಗೆ ಸಂಪರ್ಕ ಕಲ್ಪಿಸುವ ರಸ್ತೆ ಈವರೆಗೆ ಮಣ್ಣಿನ ರಸ್ತೆಯಾಗಿಯೇ ಉಳಿದಿದೆ. ನಮ್ಮ ಈ ಭಾಗದ ಜನಪ್ರತಿನಿಧಿಗಳು ಚುನಾವಣೆ ಸಂದರ್ಭದಲ್ಲಿ ಬಂದು ರಸ್ತೆ ಅಭಿವೃದ್ಧಿಪಡಿಸುವುದಾಗಿ ಭರವದೆ ನೀಡುತ್ತಾರೆಯೇ ವಿನಃ ಅಭಿವೃದ್ಧಿಯ ಗೋಜಿಗೇ ಹೋಗುವುದಿಲ್ಲ. ಒಟ್ಟು ಹತ್ತು ಕಿ.ಮೀ. ರಸ್ತೆಯಲ್ಲಿ ಈವರೆಗೆ ಆಗಿರುವಂಥದ್ದು ಕೇವಲ 1 ಕಿ.ಮೀ. ನಷ್ಟು ಡಾಮರೀಕರಣ ಹಾಗೂ 900 ಮೀಟರಿನಷ್ಟು ಕಾಂಕ್ರಿಟೀಕರಣ ಮಾತ್ರವಾಗಿದೆ. ಇದನ್ನು ಯಾರು ಕೇಳುವವರಿಲ್ಲದ ಹಾಗಾಗಿದ್ದು, ಅದಕ್ಕಾಗಿ ನಾವೆಲ್ಲಾ ಗ್ರಾಮಸ್ಥರು ಒಟ್ಟಾಗಿ ನ್ಯಾಯಕ್ಕಾಗಿ ಹೊರಾಡಬೇಕಾದ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿದೆ ಎಂದರು.
ಸಭೆಯಲ್ಲಿ ರಸ್ತೆ ಹೋರಾಟದ ಪ್ರಮುಖರಾದ ಸಂತೋಷ್ ಇಡಾಳ, ಶೇಖರ ಗೌಡ ಕೋಡಿಯಡ್ಕ, ಗ್ರಾಮಸ್ಥರಾದ ಸೀತಾರಾಮ ಗೌಡ ಇಡಾಳ, ಹರೀಶ್ ಕೋಡಿಯಡ್ಕ, ಕುಶಾಲಪ್ಪ ಗೌಡ ಕೆದ್ದೋಟೆ, ಅಶೋಕ್ ಇಡಾಳ, ಮೋಕ್ಷಿತ್ ಇಡಾಳ, ಸತೀಶ್ ಕೆದ್ದೋಟೆ, ಕೇಶವ ಇಡಾಳ, ಶೇಖರ ಇಡಾಳ, ಶೇಖರ ಕೆದ್ದೋಟೆ, ಗುರುಕಿರಣ್ ಇಡಾಳ, ಭುವನೇಶ್ವರ ಇಡಾಳ ಸೇರಿದಂತೆ ಹಲವರು ಭಾಗವಹಿಸಿದ್ದರು.