(ನ್ಯೂಸ್ ಕಡಬ) newskadaba.com,ಡಿ.23 ಬೆಂಗಳೂರು: ಸಮರ್ಪಕ ರಸ್ತೆ ಕೊರತೆ ಕಾರಣಕ್ಕೆ ರಾಜ್ಯದ ಸಾವಿರಾರು ಹಳ್ಳಿಗಳು ಕೆಂಪು ಬಸ್ಗಳ ಮುಖವನ್ನೇ ನೋಡಿಲ್ಲ. ರಸ್ತೆ ಸಂಪರ್ಕ ಜಾಲವಿಲ್ಲದ ಕಾರಣಕ್ಕೆ ರಾಜ್ಯದ ಸುಮಾರು 1,749 ಗ್ರಾಮಗಳತ್ತ ಸರಕಾರಿ ಬಸ್ಗಳೇ ಸುಳಿಯುತ್ತಿಲ್ಲ.
ದೇಶದ ಇತರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಸಾರಿಗೆ ವ್ಯವಸ್ಥೆ ಉತ್ತಮ ಸ್ಥಿತಿಯಲ್ಲಿದೆ. ಸರಕಾರ, ರಾಜ್ಯ ವ್ಯಾಪಿ ರಸ್ತೆ ಸಾರಿಗೆ ವ್ಯವಸ್ಥೆಯಲ್ಲಿ ಉತ್ತಮ ಸಂಪರ್ಕ ಸಾಧಿಸಿದೆ. ರಾಜ್ಯದ ಸಾರ್ವಜನಿಕ ಸಾರಿಗೆಯ ಪ್ರಮುಖ ಭಾಗವಾಗಿರುವ ಕೆಎಸ್ಆರ್ಟಿಸಿ, ರಾಜ್ಯದ ಉದ್ದಗಲಕ್ಕೂ ಸೇವೆ ಒದಗಿಸುತ್ತಿದೆ. ಆದರೆ, ರಸ್ತೆ ಸೌಕರ್ಯದಿಂದ ವಂಚಿತವಾಗಿರುವ ಗ್ರಾಮಗಳಿಗೆ ಬಸ್ ಸೇವೆಯ ಭಾಗ್ಯವಿಲ್ಲ.
ಬಸ್ ಸೌಕರ್ಯದಿಂದ ವಂಚಿತವಾಗಿರುವ ಗ್ರಾಮಗಳ ಜನರ ಬದುಕು ನಿತ್ಯನರಕ. ಇಲ್ಲಿನ ಜನರು ಹಾಗೂ ಶಾಲಾ ಮಕ್ಕಳು ದೂರದ ಪಟ್ಟಣಗಳಿಗೆ ಕಿಲೋ ಮೀಟರ್ಗಟ್ಟಲೇ ಕಾಲ್ನಡಿಗೆಯಲ್ಲೇ ಹೋಗುವ ಪರಿಸ್ಥಿತಿಯಿದೆ. ಪ್ರಗತಿಶೀಲ ರಾಜ್ಯವಾದ ಕರ್ನಾಟಕದಲ್ಲಿ ಈಗಲೂ ಹಳ್ಳಿಗಳಿಗೆ ನೇರ ರಸ್ತೆ ಸಾರಿಗೆ ವ್ಯವಸ್ಥೆ ಇಲ್ಲದಿರುವುದು ಮುಜುಗರದ ವಿಚಾರ. ಎಲ್ಲಾ ಕ್ಷೇತ್ರಗಳಲ್ಲೂ ಅತಿ ವೇಗವಾಗಿ ಬೆಳೆಯುತ್ತಿರುವ ರಾಜ್ಯದಲ್ಲಿ ಎಲ್ಲಾ ಗ್ರಾಮಗಳಿಗೂ ಬಸ್ ಸೌಕರ್ಯ ಇಲ್ಲದಿರುವುದು ರಾಜ್ಯದ ಪ್ರತಿಷ್ಠೆಗೆ ಕುಂದು ತರುವ ಸಂಗತಿಯಾಗಿದೆ.












