(ನ್ಯೂಸ್ ಕಡಬ) newskadaba.com, ಡಿ.03: ಬೆಂಗಳೂರು: ಎಸ್ಸೆಸ್ಸೆಲ್ಸಿ- ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಉತ್ತೀರ್ಣ ಅಂಕಗಳನ್ನು ಶೇ.35ರಿಂದ ಶೇ.33ಕ್ಕೆ ಇಳಿಸಿದ ಶಿಕ್ಷಣ ಇಲಾಖೆ, ಇದೀಗ ಮತ್ತೊಂದು ಸುಧಾರಣೆ ತರಲು ಚಿಂತನೆ ನಡೆಸಿದೆ. ಇತ್ತೀಚೆಗಷ್ಟೇ ಎಸ್ಸೆಸ್ಸೆಲ್ಸಿ- ದ್ವಿತೀಯ ಪಿಯುಸಿ ಪರೀಕ್ಷೆಗಳ ಅಂತಿಮ ವೇಳಾಪಟ್ಟಿ ಬಿಡುಗಡೆ ಮಾಡಿದ್ದ ಶಿಕ್ಷಣ ಇಲಾಖೆ, 3 ಪರೀಕ್ಷೆಗಳನ್ನು ನಡೆಸುವ ಪರಿಪಾಠಕ್ಕೆ ತಡೆ ನೀಡಲು ಸಜ್ಜಾಗಿದೆ.
ಈ ಹಿಂದೆ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮತ್ತೆ 2 ಬಾರಿ ಪರೀಕ್ಷೆ ಬರೆಯುವುದಕ್ಕೆ ಅವಕಾಶ ನೀಡಲಾಗಿತ್ತು. ಮಧು ಬಂಗಾರಪ್ಪ ಅವರು ಶಿಕ್ಷಣ ಸಚಿವರಾದ ಬಳಿಕ ಎರಡು ಪರೀಕ್ಷೆ ಬದಲಿಗೆ ಮೂರು ಪರೀಕ್ಷೆಗಳನ್ನು ಜಾರಿಗೆ ತರಲಾಗಿತ್ತು. ಈ ನಡುವೆ, ಎಸ್ಸೆಸ್ಸೆಲ್ಸಿ- ಪಿಯುಸಿ ವಿದ್ಯಾರ್ಥಿಗಳ ಉತ್ತೀರ್ಣ ಅಂಕಗಳನ್ನು ಕಡಿತಗೊಳಿಸಿದ ಬಳಿಕ ಮೂರು ಪರೀಕ್ಷೆ ನಡೆಸುವ ಅಗತ್ಯವಿಲ್ಲ ಎಂದು ಚಿಂತಿಸಿರುವ ಶಿಕ್ಷಣ ಇಲಾಖೆ, ಈ ವರ್ಷದಿಂದಲೇ 2 ಪರೀಕ್ಷೆಗಳನ್ನು ಮಾತ್ರ ನಡೆಸಲು ಮುಂದಾಗಿದೆ.
ಎಸ್ಸೆಸ್ಸೆಲ್ಸಿ- ಪಿಯುಸಿ ವಿದ್ಯಾರ್ಥಿಗಳ ಉತ್ತೀರ್ಣ ಅಂಕಗಳನ್ನು ಕಡಿತ ಮಾಡಿರುವುದರಿಂದ ಮೊದಲೆರಡು ಪರೀಕ್ಷೆಗಳಲ್ಲೇ ಬಹುತೇಕ ವಿದ್ಯಾರ್ಥಿಗಳು ಪಾಸಾಗುತ್ತಿದ್ದಾರೆ. ಅಲ್ಲದೆ, ಮೂರನೇ ಪರೀಕ್ಷೆಯಲ್ಲೂ ಅಂಕಗಳಲ್ಲಿ ಅಂತಹ ಸುಧಾರಣೆ ಕಾಣುತ್ತಿಲ್ಲ. ಹೀಗಾಗಿ, ಮೂರನೇ ಪರೀಕ್ಷೆ ಕೈಬಿಡಲು ಇಲಾಖೆ ಗಂಭೀರ ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.








