ಕಾಸರಗೋಡು : ರಸಮಂಜರಿ ಕಾರ್ಯಕ್ರಮದ ಸಮಯದಲ್ಲಿ ಕಾಲ್ತುಳಿತ – 15 ಮಂದಿಗೆ ಗಾಯ



(ನ್ಯೂಸ್‌ ಕಡಬ) newskadaba.com,  ನ.24: ನಗರದ ಹೊರವಲಯದಲ್ಲಿ ನಡೆದ ರಸಮಂಜರಿ ಕಾರ್ಯಕ್ರಮದ ವೇಳೆ ನಿರೀಕ್ಷೆಗೂ ಮೀರಿ ಸೇರಿದ್ದ ಜನಸಂದಣಿಯಿಂದ ನೂಕುನುಗ್ಗಲು ಸಂಭವಿಸಿ, ಕಾಲ್ತುಳಿತದಿಂದ ಕನಿಷ್ಠ 15 ಮಂದಿ ಗಾಯಗೊಂಡಿರುವ ಘಟನೆ ರವಿವಾರ ರಾತ್ರಿ ನಡೆದಿದೆ. ಗಾಯಗೊಂಡವರಲ್ಲಿ ಮಹಿಳೆಯರು, ಮಕ್ಕಳು ಸೇರಿದ್ದಾರೆ ಎಂದು ತಿಳಿದು ಬಂದಿದೆ. ಗಾಯಾಳುಗಳನ್ನು ಕಾಸರಗೋಡು ನಗರದ ಹಲವು ಆಸ್ಪತ್ರೆಗೆ ದಾಖಲಿಸಲಾಗಿದೆ.





ಕಾಸರಗೋಡು ಫ್ಲೀ ಯುವಜನ ಸಂಘಟನೆ ವತಿಯಿಂದ ನುಳ್ಳಿಪ್ಪಾಡಿ ಪ್ರದೇಶದಲ್ಲಿ ಆಯೋಜಿಸಿದ್ದ ಸಾಮಾಜಿಕ ಮಾಧ್ಯಮ ಹೆಸರಾಂತ, ಗಾಯಕ ಹನಾನ್ ಷಾ ಅವರ ಕಾರ್ಯಕ್ರಮಕ್ಕೆ ಸಾವಿರಾರು ಮಂದಿ ಸೇರಿದ್ದರು. ಕಾರ್ಯಕ್ರಮಕ್ಕೆ ಟಿಕೆಟ್ ವ್ಯವಸ್ಥೆ ಮಾಡಲಾಗಿತ್ತು. ಟಿಕೆಟ್ ಪಡೆದವರ ಜೊತೆ ಟಿಕೆಟ್ ಇಲ್ಲದವರೂ ಪ್ರಮುಖ ಗಾಯಕರನ್ನು ನೋಡುವ ಉತ್ಸಾಹದಿಂದ ಮೈದಾನಕ್ಕೆ ಒಳನುಗ್ಗಲು ಯತ್ನಿಸಿದಾಗ ಗೊಂದಲ ಸೃಷ್ಟಿಯಾಯಿತು.. ಕಾರ್ಯಕ್ರಮದ ಆರಂಭಕ್ಕೂ ಮೊದಲೇ ಜಮಾಯಿಸಿದ್ದ ಜನಸಂದಣಿಯಿಂದ ಸಂಚಾರವೂ ಕೆಲಕಾಲ ಅಸ್ತವ್ಯಸ್ತಗೊಂಡಿತ್ತು ಎಂದು ತಿಳಿದು ಬಂದಿದೆ.






ಹನಾನ್ ಷಾ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವ ಮಾಹಿತಿ ಹರಡುತ್ತಿದ್ದಂತೆ ಜನಸಂಖ್ಯೆ ಹೆಚ್ಚಾಯಿತು ಎಂದು ಮೂಲಗಳು ತಿಳಿಸಿವೆ.. ಕಾರ್ಯಕ್ರಮದ ನಿರ್ವಾಹಕರು ತುರ್ತು ನಿರ್ಗಮನಗಳನ್ನು ತೆರೆದು ಜನರನ್ನು ಹೊರಗೆ ಕಳುಹಿಸುವಂತೆ ಮೈಕ್ ಮೂಲಕ ಮನವಿ ಮಾಡಿಕೊಂಡರು. ಆ ಬಳಿಕ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ.

error: Content is protected !!
Scroll to Top