(ನ್ಯೂಸ್ ಕಡಬ) newskadaba.com, ನ.17: ಬಾಂಗ್ಲಾದೇಶ ಮಾಜಿ ಪ್ರಧಾನಿ ಶೇಖ್ ಹಸೀನಾ ಮಾನವ ಹಕ್ಕುಗಳ ಉಲ್ಲಂಘನೆ ಸೇರಿ ಹಲವು ಆರೋಪಗಳನ್ನು ಎದುರಿಸುತ್ತಿದ್ದಾರೆ. ಇಂದು ಶಿಕ್ಷೆಯ ಪ್ರಮಾಣ ಪ್ರಕಟವಾಗಿದ್ದು, ಬಾಂಗ್ಲಾದೇಶದಲ್ಲಿ ಬಹುದೊಡ್ಡ ಮಟ್ಟದಲ್ಲಿ ನಡೆದ ದಂಗೆಗೆ ಶೇಖ್ ಹಸೀನಾ ಅವರ ಪ್ರಚೋದನಕಾರಿ ಹೇಳಿಕೆಯೇ ಕಾರಣ ಎಂದು ತೀರ್ಪು ಹೇಳಲಾಗಿದೆ. ನ್ಯಾಯಮಂಡಳಿಯು ಶೇಖ್ ಹಸೀನಾಗೆ ಗಲ್ಲು ಶಿಕ್ಷೆಯನ್ನು ವಿಧಿಸಿದೆ. ICT ಕೋರ್ಟ ತೀರ್ಪನ್ನು ನೀಡಿದೆ.
ನ್ಯಾಯಮೂರ್ತಿ ಎಂಡಿ ಗೋಲಮ್ ಮೊರ್ತುಜಾ ಮಜುಂದಾರ್ ನೇತೃತ್ವದ ತ್ರಿಸದಸ್ಯ ನ್ಯಾಯಮಂಡಳಿಯು ಹಸೀನಾ ಅವರ ಇಬ್ಬರು ಸಹಾಯಕರಾದ ಮಾಜಿ ಗೃಹ ಸಚಿವ ಅಸಾದುಝಮಾನ್ ಖಾನ್ ಕಮಾಲ್ ಮತ್ತು ಮಾಜಿ ಪೊಲೀಸ್ ಮುಖ್ಯಸ್ಥ ಚೌಧುರಿ ಅಬ್ದುಲ್ಲಾ ಅಲ್-ಮಾಮುನ್ ಅವರಿಗೂ ಮರಣದಂಡನೆ ವಿಧಿಸಲಾಗಿದೆ. ಹಸೀನಾ ಮತ್ತು ಕಮಲ್ ಅವರನ್ನು ಪರಾರಿಯಾಗಿರುವ ಅಪರಾಧಿಗಳೆಂದು ಘೋಷಿಸಿ ಗೈರುಹಾಜರಿಯಲ್ಲಿ ವಿಚಾರಣೆಗೆ ಒಳಪಡಿಸಲಾಗಿದೆ.
ಹಸೀನಾ ವಿರುದ್ಧದ ಆರೋಪಗಳು
ಬಾಂಗ್ಲಾದೇಶದಲ್ಲಿ ಕಳೆದ ವರ್ಷ ನಡೆದಿದ್ದ ವಿದ್ಯಾರ್ಥಿ ದಂಗೆಯ ರೂವಾರಿ ಹಸೀನಾ ಎಂದು ನ್ಯಾಯಾಲಯ ತೀರ್ಪು ನೀಡಿದ ಕೆಲವೇ ಕ್ಷಣಗಳ ಬಳಿಕ ಗಲ್ಲು ಶಿಕ್ಷೆ ಪ್ರಕಟವಾಗಿದೆ. ಹಸೀನಾ ಮೇಲೆ ಒಟ್ಟು ಐದು ಆರೋಪಗಳನ್ನು ಮಾಡಲಾಗಿತ್ತು.
ಕೊಲೆ ಯತ್ನ, ಚಿತ್ರಹಿಂಸೆ ಮತ್ತು ಇತರ ಅಮಾನವೀಯ ಕೃತ್ಯಗಳ ಆರೋಪ ಹೊರಿಸಲಾಗಿತ್ತು. ಕಾನೂನು ಜಾರಿ ಸಿಬ್ಬಂದಿ ಮತ್ತು ಅವಾಮಿ ಲೀಗ್-ಸಂಯೋಜಿತ ಸಶಸ್ತ್ರ ಗುಂಪುಗಳು ನಾಗರಿಕರ ವಿರುದ್ಧ ನಡೆಸಿದ ಅಪರಾಧಗಳಿಗೆ ಹಸೀನಾ ಪ್ರೋತ್ಸಾಹ, ಪ್ರಚೋದನೆ, ಅನುಕೂಲ ಮಾಡಿಕೊಟ್ಟರು ಮತ್ತು ಭಾಗಿಯಾಗಿದ್ದಾರೆ ಎಂದು ನ್ಯಾಯಾಲಯದ ಮುಂದೆ ಹೇಳಲಾಗಿತ್ತು. ವಿದ್ಯಾರ್ಥಿ ಪ್ರತಿಭಟನಾಕಾರರನ್ನು ಹತ್ತಿಕ್ಕಲು ಮಾರಕ ಆಯುಧಗಳು, ಹೆಲಿಕಾಪ್ಟರ್‌ಗಳು ಮತ್ತು ಡ್ರೋನ್‌ಗಳನ್ನು ಬಳಸಲು ಅವರು ಆದೇಶಿಸಿದ್ದಾರೆ ಎಂದು ಕೌಂಟ್ 2 ಆರೋಪಿಸಿದೆ.













