(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಮೇ.03. ಬಿಜೆಪಿ ಪಾಳಯದಲ್ಲಿ ಸಕ್ರಿಯರಾಗಿದ್ದ ಹಿರಿಯ ಮುಖಂಡ ಗಂಗಾಧರ ಗೌಡ ಬುಧವಾರದಂದು ಬೆಳ್ತಂಗಡಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಕೇರಳದ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಸಮ್ಮುಖದಲ್ಲಿ ಮಾತೃ ಪಕ್ಷದ ಕೈ ಹಿಡಿದಿದ್ದಾರೆ.
ಈ ಸಲ ಬೆಳ್ತಂಗಡಿಯಲ್ಲಿ ಗೆಲ್ಲಲೇಬೇಕೆಂದು ಪಣ ತೊಟ್ಟಿದ್ದ ಬಿಜೆಪಿಗೆ ಇದರಿಂದಾಗಿ ದೊಡ್ಡ ಆಘಾತವೊಂದು ಎದುರಾಗಿದೆ. ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಗಂಗಾಧರ ಗೌಡ ಅವರು ಕಾಂಗ್ರೆಸ್ ಸೇರ್ಪಡೆಗೊಳ್ಳುತ್ತಿದ್ದಂತೆ ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜಾ ವಿರುದ್ಧ ವಾಗ್ದಾಳಿ ನಡೆಸಿದರು. ಕೆಪಿಎಸ್ಸಿ ಹಗರಣದಲ್ಲಿ ಬಿಜೆಪಿ ಬೆಳ್ತಂಗಡಿ ಅಭ್ಯರ್ಥಿ ಹರೀಶ್ ಪೂಂಜಾರವರ ಕರ್ಮಕಾಂಡವಿದೆ ಎಂದು ಗಂಭೀರ ಆರೋಪ ಮಾಡಿದರು. ಕೆಪಿಎಸ್ಸಿ ಹಗರಣದಲ್ಲಿ ಪಾಲು ಪಡೆದಿದ್ದಲ್ಲದೇ, ಏಜೆಂಟಾಗಿ ಕೋಟ್ಯಾಂತರ ಹಣ ನುಂಗಿದ್ದಾರೆ. ಹಗರಣದ ಬಗ್ಗೆ ಸುಪ್ರೀಂಕೋರ್ಟ್ ತನಿಖೆಗೆ ಆದೇಶ ಮಾಡಿದೆ. ಈ ಬಗ್ಗೆ ತನಿಖೆಯಾದರೆ ಬಿಜೆಪಿ ಅಭ್ಯರ್ಥಿ ಜತೆ ಕೆಪಿಎಸ್ಸಿ ಸದಸ್ಯರು ಜೈಲಿಗೆ ಹೋಗುತ್ತಾರೆ ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಇಂಧನ ಸಚಿವ ಹಾಗೂ ರಾಜ್ಯ ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಪೂರ್ಣ ಬಹುಮತದೊಂದಿಗೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದ್ದು, ಉಭಯ ಜಿಲ್ಲೆಗಳಲ್ಲಿ ಕಳೆದ ಬಾರಿಗಿಂತ ಎರಡು ಸ್ಥಾನಗಳನ್ನು ಜಾಸ್ತಿ ಗಳಿಸಲಿದ್ದೇವೆ ಎಂದು ಹೇಳಿದರು. ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜನರಿಗೆ ನೀಡಿದ ಪ್ರಣಾಳಿಕೆಯನ್ನು ಈಡೇರಿಸಿ, ನುಡಿದಂತೆ ನಡೆದ ಸರ್ಕಾರವಾಗಿದೆ. ಕಳೆದ 5 ವರ್ಷದ ಅವಧಿಯಲ್ಲಿ ಅಭಿವೃದ್ಧಿಯನ್ನೇ ಮೂಲಮಂತ್ರವಾಗಿ ಆಡಳಿತ ನಡೆಸಿದೆಯೇ ಹೊರತು ಭ್ರಷ್ಟಾಚಾರಕ್ಕೆ ಎಲ್ಲಿಯೂ ಅವಕಾಶ ನೀಡಿಲ್ಲ ಎಂದರು.