(ನ್ಯೂಸ್ ಕಡಬ) newskadaba.com ಕಡಬ, ಮೇ.03. ಜಾರ್ಜಿಯನ್ ತೀರ್ಥಾಟನಾ ಕೇಂದ್ರವೆಂದೇ ಪ್ರಖ್ಯಾತಿ ಪಡೆದ ಇಚಿಲಂಪಾಡಿಯ ಸಂತ ಜಾರ್ಜ್ ಆರ್ಥಡಾಕ್ಸ್ ಸಿರಿಯನ್ ಚರ್ಚ್‌ನ ವಾರ್ಷಿಕ ಹಬ್ಬವು ಮೇ ತಿಂಗಳು ಒಂದನೇ ತಾರೀಖಿನಂದು ದಿವ್ಯ ಬಲಿಪೂಜೆ ಹಾಗೂ ಧ್ವಜಾರೋಹಣದೊಂದಿಗೆ ಆರಂಭಗೊಂಡಿದ್ದು, ಏಳನೇ ತಾರೀಖಿನಂದು ಸಮಾಪನಾ ಆಶೀರ್ವಾದದೊಂದಿಗೆ ಕೊನೆಗೊಳ್ಳಲಿದೆ.
ವಿಶೇಷ ಕಾರಣಿಕ ಸ್ಥಳವಾದ ಸಂತ ಜಾರ್ಜ್ ಚರ್ಚ್ ಜಾತ್ರೆಗೆ ಜಾತಿ, ಮತ, ವರ್ಣ ಎಂಬ ಭೇದ ಭಾವವಿಲ್ಲದೇ ಸಾವಿರಾರು ಜನರು ಭಾಗವಹಿಸುವುದು ವಾಡಿಕೆ. ಇಲ್ಲಿ ಉರುಳು ಸೇವೆ, ಮೊಣಕಾಲಿನ ನಡಿಗೆ, ಶಿಲುಬೆ, ಮೊಂಬತ್ತಿ, ಕಲ್ಲು ಹೊತ್ತು ನಡಿಗೆ, ಕೋಳಿ ಹರಕೆ ಸೇರಿದಂತೆ ಹಲವಾರು ಪ್ರಮುಖ ಹರಕೆಯನ್ನು ಜನರು ನಿರ್ವಹಿಸುತ್ತಾರೆ. ವಿಷ ಜಂತುಗಳಿಂದ ಮುಕ್ತಿ ಪಡೆಯಲು ವಿವಿಧ ಬಗೆಯ ಹರಕೆಯನ್ನು ಸಲ್ಲಿಸುವುದು ಈಗಲೂ ನಡೆಯುತ್ತದೆ.
ಈ ವರ್ಷದ ವಾರ್ಷಿಕ ಹಬ್ಬದಲ್ಲಿ ಕೇರಳದ ಮಾವೇಲಿಕರ ಧರ್ಮಪ್ರಾಂತ್ಯದ ವಂದನೀಯ ಧರ್ಮಾಧ್ಯಕ್ಷರಾದ ಅಲೆಕ್ಸಿಯೋಸ್ ಮಾರ್ ಯೌಸೇಬಿಯೋಸ್ ಮೆತ್ರಾಪೋಲೀತ್ತಾ ಹಾಗೂ ಬ್ರಹ್ಮಾವರ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ವಂದನೀಯ ಯಾಕೋಬ್ ಮಾರ್ ಎಲಿಯಾಸ್ ಮೆತ್ರಾಪೋಲೀತ್ತಾ ರವರು ನೇತೃತ್ವ ವಹಿಸಲಿದ್ದಾರೆ. ವಿವಿಧ ಚರ್ಚ್ ಗಳ ಧರ್ಮಗುರುಗಳು ಸಹಕಾರ ನೀಡಲಿದ್ದಾರೆ. ಮೇ ತಿಂಗಳ ಒಂದನೆಯ ತಾರೀಕಿನಿಂದ ಹಬ್ಬದ ಕೊನೆಯ ದಿನಗಳ ವರೆಗೆ ಪ್ರತಿದಿನ ಪವಿತ್ರ ದಿವ್ಯ ಬಲಿಪೂಜೆ, ಬೆಳಗಿನ ಮಧ್ಯಾಹ್ನ, ಹಾಗೂ ಸಾಯಂಕಾಲ ಪ್ರಾಥನೆಗಳು, ಪಾದಯಾತ್ರೆಗಳು ಮತ್ತು ವಿಶೇಷ ಧ್ಯಾನಗಳು, ಸಂತ ಜಾರ್ಜ್ ರ ಮಧ್ಯಸ್ಥ ಪ್ರಾರ್ಥನೆಗಳು ನಡೆಯಲಿದೆ. ಈ ದಿನಗಳಲ್ಲಿ ಹರಕೆಯ ರೂಪದಲ್ಲಿ ವಿಶೇಷ ದಿವ್ಯ ಬಲಿಪೂಜೆಗೂ ಅವಕಾಶವನ್ನು ಕಲ್ಪಿಸಲಾಗಿದೆ. ಪ್ರಮುಖ ದಿನವಾದ ಏಳನೇ ತಾರೀಖಿನಂದು ಜನರಿಗೆ ಅನುಕೂಲವಾಗುವಂತೆ ವಿವಿಧ ಸ್ಥಳಗಳಿಂದ ಬಸ್ಸುಗಳ ವ್ಯವಸ್ಥೆ ನೀಡಲಾಗಿದೆ. ಜನರು ಹರಕೆ ಕೋಳಿ ಹಾಗೂ ಹರಕೆಯ ಅಪ್ಪವನ್ನು ನೀಡಲು ಏಳನೇ ತಾರೀಖಿನಂದು ಬೆಳಗ್ಗೆ ಸೌಕರ್ಯ ಕಲ್ಪಿಸಲಾಗಿದೆ ಎಂದು ಚರ್ಚ್ ಧರ್ಮಗುರುಗಳಾದ ರೆವರೆಂಡ್ ಫಾದರ್ ಸ್ಕರಿಯಾ ರಂಬಾನ್ ಹಾಗೂ ಚರ್ಚ್‌ನ ಟ್ರಸ್ಟಿ ಮೇಹಿ ಜಾರ್ಜ್ ಮತ್ತು ಸೆಕ್ರೆಟರಿ ಟಿ.ಪಿ ಕುರಿಯನ್ ರವರು ತಿಳಿಸಿದ್ದಾರೆ.
✍? ಪ್ರಕಾಶ್ ಕಡಬ