(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಮೇ.02. ಶೋಕಿಗಾಗಿ ಬೈಕ್ ಕದ್ದು ಪೊಲೀಸರಿಗೆ ಸಿಕ್ಕಿ ಬಿದ್ದು ಜೈಲು ಪಾಲಾದ ಯುವಕನೋರ್ವ ಕೊಲೆ ಆರೋಪಿಯೋರ್ವನ ಪರಿಚಯದೊಂದಿಗೆ ತನಗೆ 24 ವರ್ಷ ತುಂಬುವುದರೊಳಗೆ ಇಪ್ಪತ್ತೆಂಟು ಕಳ್ಳತನ ನಡೆಸಿ ಇದೀಗ ಪೊಲೀಸರ ಅತಿಥಿಯಾಗಿ ಪಶ್ಚಾತ್ತಾಪ ಪಟ್ಟ ಘಟನೆ ಉಪ್ಪಿನಂಗಡಿಯಿಂದ ವರದಿಯಾಗಿದೆ.
ಉಪ್ಪಿನಂಗಡಿ ಠಾಣಾ ವ್ಯಾಪ್ತಿಯ ಶಿಶಿಲದ ದೇವಾಲಯ ಹಾಗೂ ನೆಲ್ಯಾಡಿಯ ಚರ್ಚ್‌ಗಳಲ್ಲಿ ನಡೆದ ಕಳವು ಪ್ರಕರಣಕ್ಕೆ ಸಂಬಂಧಿಸಿ ಬಂಧಿತನಾದ ತುಮಕೂರು ಬಿ. ಗೊಲ್ಲಹಳ್ಳಿ ನಿವಾಸಿ ನವೀನ್ ಕುಮಾರ್ ಜಿ.ಎಸ್. ಮಾಧ್ಯಮದವರ ಜೊತೆ ಮಾತನಾಡಿ ಪಶ್ಚಾತ್ತಾಪ ಪಟ್ಟುಕೊಂಡಿದ್ದಾನೆ. ತಂದೆ ತಾಯಿಗೆ ಏಕೈಕ ಪುತ್ರನಾದ ನವೀನ್ ದ್ವಿತೀಯ ಪಿಯುಸಿ ಮುಗಿಸಿ ಫ್ಯಾಕ್ಟರಿಯೊಂದರಲ್ಲಿ ಕಾರ್ಮಿಕನಾಗಿದ್ದ ವೇಳೆ ಬೈಕ್ ಸವಾರಿ ಮಾಡುತ್ತಾ ಶೋಕಿ ಜೀವನ ನಡೆಸುವ ಆಸೆಯಿಂದ ಬೈಕ್ ಗಳನ್ನು ಕದಿಯಲು ಆರಂಭಿಸಿ ಪೊಲೀಸರ ಅತಿಥಿಯಾಗಿದ್ದ. ಜೈಲಿನಲ್ಲಿ ಕೊಲೆ ಆರೋಪಿ ಉಮೇಶ್ ಎಂಬಾತನ ಪರಿಚಯವಾಗಿ ಕಳವಿನ ಹೊಸ ಆವಿಷ್ಕಾರಗಳನ್ನು ತಿಳಿದುಕೊಂಡು ತನಗೆ 24 ವರ್ಷ ತುಂಬುವುದರೊಳಗೆ 28 ಕಳ್ಳತನ ನಡೆಸಿದ್ದಾನೆ. ಜೈಲಿನಿಂದ ಬಿಡುಗಡೆಗೊಂಡ ನಂತರ ವಿವಿಧ ದೇವಾಲಯ, ಚರ್ಚ್‌ಗಳ ಮಾಹಿತಿಯನ್ನು ಗೂಗಲ್‌ನಿಂದ ಪಡೆದುಕೊಂಡು ಭಕ್ತರ ಸೋಗಿನಲ್ಲಿ ಭೇಟಿ ನೀಡಿ, ಅರ್ಚಕರೊಂದಿಗೆ ಮಾತನಾಡುತ್ತಾ ಅಂದೇ ರಾತ್ರಿ ದೇವಾಲಯಕ್ಕೆ ನುಗ್ಗಿ ಸಿಕ್ಕಿದ್ದನ್ನೆಲ್ಲಾ ದೋಚುತ್ತಿದ್ದನೆನ್ನಲಾಗಿದೆ.
ದುಡಿದು ಸಾಧನೆ ಮಾಡೋ ವಯಸ್ಸಿನಲ್ಲಿ ದುಡಿಮೆ ಬಿಟ್ಟು ಕದಿಯೋಕೆ ಶುರುಮಾಡಿದೆ. ಕದಿಯುವಾಗ ತಪ್ಪೆಂದು ಅನಿಸುತ್ತಿರಲಿಲ್ಲ. ನನ್ನಿಂದ 28 ಕಳ್ಳತನ ನಡೆದಿದ್ದು, ಈಗ ಪಶ್ಚಾತ್ತಾಪವಾಗುತ್ತಿದೆ. ನನ್ನ ಮೇಲೆ ಭರವಸೆ ಇರಿಸಿದ್ದ ಹೆತ್ತವರ ನೋವಿಗೆ ಕಾರಣನಾದೆ ಎಂಬ ನೋವು ಕಾಡುತ್ತಿದೆ. ಅಂದು ಜೈಲಿಗೆ ಹೋಗದೆ ಹಾಗೂ ಉಮೇಶನ ಸಂಪರ್ಕವಾಗದಿರುತ್ತಿದ್ದರೆ ನಾನಿಂದು ಈ ಮಟ್ಟಕ್ಕೇರುತ್ತಿರಲಿಲ್ಲ ಎನಿಸುತ್ತಿದೆ. ನನ್ನ ಬದುಕು ಯಾರಿಗಾದರೂ ಪಾಠವಾಗುವುದಾದರೆ ಪತ್ರಿಕೆಯಲ್ಲಿ ಪ್ರಕಟಿಸಿ. ನನ್ನಂತೆ ಇನ್ಯಾರೂ ಹೀಗಾಗಬಾರದು ಎಂದು ತನ್ನ ಅಳಲನ್ನು ತೋಡಿಕೊಂಡಿದ್ದಾನೆ.