(ನ್ಯೂಸ್ ಕಡಬ) newskadaba.com ಮಂಗಳೂರು, ಜು.06. ಮಾನವ ಧರ್ಮಕ್ಕಿಂತ ಮಿಗಿಲಾದ ಧರ್ಮ ಬೇರೊಂದಿಲ್ಲ ಎಂಬುದನ್ನು ಬಿ.ಸಿ. ರೋಡಿನ ಯುವಕನೊಬ್ಬ ತನ್ನ ಮಹತ್ಕಾರ್ಯದ ಮೂಲಕ ಸಾದರಪಡಿಸಿದ್ದಾನೆ.
ಕೋಮು ಸಂಘರ್ಷದಿಂದ ಕರಾವಳಿ ಜಿಲ್ಲೆ ಉರಿಯುತ್ತಿದ್ದರೆ ಜಾತಿ, ಧರ್ಮದ ಹಂಗು ತೊರೆದು ಗೆಳೆಯನ ರಕ್ಷಣೆಗೆ ಧಾವಿಸಿ ಬಂದಿದ್ದಾರೆ ಹಣ್ಣಿನ ವ್ಯಾಪಾರಿ ಅಬ್ದುಲ್ ರವೂಫ್. ಹೌದು, ಕಳೆದ ಮಂಗಳವಾರ ರಾತ್ರಿ ಸುಮಾರು ಹತ್ತು ಗಂಟೆಗೆ ಬಿ.ಸಿ.ರೋಡಿನ ಉದಯ ಲಾಂಡ್ರಿ ಮಾಲೀಕ, RSS ಕಾರ್ಯಕರ್ತ ಶರತ್‍ನಿಗೆ ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದರು. ತಕ್ಷಣವೇ ಅಕ್ಕಪಕ್ಕದವರು ಬಂದು ರಕ್ತದ ಮಡುವಿನಲ್ಲಿ ಬಿದ್ದಿದ್ದ ಶರತ್‍ನನ್ನು ನೋಡುತ್ತಿದ್ದರೆ ವಿನ: ಯಾರೊಬ್ಬರೂ ಸಹಾಯಕ್ಕೆ ಧಾವಿಸಿಲ್ಲ. ಆಗ ಬಂದವರೇ ಪಕ್ಕದ ಅಂಗಡಿಯಲ್ಲಿ ಹಣ್ಣಿನ ವ್ಯಾಪಾರ ಮಾಡುತ್ತಿದ್ದ ಅಬ್ದುಲ್ ರವೂಫ್. ರವೂಫ್ ರಾತ್ರಿ ಅಂಗಡಿಯಲ್ಲಿ ಕುಳಿತಿದ್ದ ವೇಳೆ ಪಕ್ಕದ ಬೇಕರಿ ಮಾಲೀಕ ಪ್ರವೀಣ್ ಆತಂಕದಲ್ಲೇ ರವೂಫ್‍ರನ್ನು ಕರೆದರು. ನಡೆದ ಘಟನೆಯನ್ನು ತಿಳಿಸಿದ ಕ್ಷಣಾರ್ಧದಲ್ಲಿ ಲಾಂಡ್ರಿಯ ಒಳಗೆ ಹೋದಾಗ ಬಟ್ಟೆಗಳ ನಡುವಿನಲ್ಲಿ ರಕ್ತದಿಂದ ತುಂಬಿದ್ದ ಶರತ್ ಬಿದ್ದಿದ್ದರು. ಜನಜಂಗುಳಿ ದೂರದಿಂದಲೇ ಇವನ್ನೆಲ್ಲಾ ಗಮನಿಸುತ್ತಿತ್ತೇ ಹೊರತು ಯಾರೊಬ್ಬರೂ ಹತ್ತಿರ ಬರಲು ತಯಾರಿರಲಿಲ್ಲ. ಆದರೆ ಅಬ್ದುಲ್ ರವೂಫ್ ಸ್ವಲ್ಪವೂ ತಡಮಾಡದೆ ಶರತ್ ದೇಹವನ್ನು ಎತ್ತಲು ಪ್ರಯತ್ನಿಸಿದರು. ಈ ಒಂದು ಮಹಾತ್ಕಾರ್ಯಕ್ಕೆ ಪ್ರವೀಣ್ ಸಾಥ್ ನೀಡಿದರು. ಬಳಿಕ ತಮ್ಮದೆ ರಿಕ್ಷಾದಲ್ಲಿ ಹಾಕಿ ತುಂಬೆ ಆಸ್ಪತ್ರೆಗೆ ಕರೆ ತಂದರು. ತುಂಬೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಅಸಾಧ್ಯವಾದಾಗ ಮತ್ತೆ ಮಂಗಳೂರಿನ ಎ. ಜೆ. ಆಸ್ಪತ್ರೆಗೆ ಸಾಗಿಸಲಾಯಿತು.
ರಾತ್ರಿ ಎರಡು ಗಂಟೆಯವರೆಗೆ ಅಬ್ದುಲ್ ರವೂಫ್ ಆಸ್ಪತ್ರೆಯಲ್ಲೆ ಇದ್ದರು. ಆಗ ನೆನಪಾಯಿತು ತನ್ನ ಅಂಗಡಿಯನ್ನು ಬಂದ್ ಮಾಡದೆ ಬಂದಿದ್ದೇನೆ ಎಂದು. ಬಳಿಕ ಗೆಳೆಯನೊಬ್ಬನ ಕಾರಿನಲ್ಲಿ ಹಿಂತಿರುಗಿದರು. ಶರತ್ ಹಾಗೂ ಅಬ್ದುಲ್ ರವೂಫ್‍ಗೆ ಹದಿನಾಲ್ಕು ವರ್ಷಗಳ ಪರಿಚಯ. ಮೊದಲು ಶರತ್‍ರ ತಂದೆ ತನಿಯಪ್ಪ ಲಾಂಡ್ರಿ ನಡೆಸುತ್ತಿದ್ದರು. ಆದರೆ ಅವರಿಗೆ ಅನಾರೋಗ್ಯವಾದಾಗ ಅವರ ಮಗ ಶರತ್ ಲಾಂಡ್ರಿ ನಡೆಸಲಾರಂಭಿಸಿದರು ಎನ್ನುತ್ತಾರೆ ಅಬ್ದುಲ್ ರವೂಫ್. ಒಬ್ಬನ ಜೀವ ಉಳಿಸುವುದಕ್ಕಿಂತ ಮಿಗಿಲಾದ ಕಾರ್ಯವಿಲ್ಲ ಎಂದು ಎಲ್ಲಾ ಧರ್ಮಗಳು ಸಾರುತ್ತವೆ. ನಾನು ಅದನ್ನೇ ಮಾಡಿದ್ದೇನೆ ಎನ್ನುವ ಅಬ್ದುಲ್ ರವೂಫ್ ಅವರಂತೆ ಎಲ್ಲರೂ ಇದ್ದರೆ ಕೊಲೆ, ಹಲ್ಲೆ, ದ್ವೇಷವಿಲ್ಲದ ನಾಡು ಕಟ್ಟಬಹುದು ಎನ್ನುವುದರಲ್ಲಿ ಸಂಶಯವೇ ಇಲ್ಲ. ಒಟ್ಟಿನಲ್ಲಿ ದುಷ್ಕರ್ಮಿಗಳ ರಕ್ತದೋಕುಳಿಗೆ ರವೂಫ್ ಜಾತಿಯ ಬಣ್ಣ ನೀಡದೆ ತಕ್ಷಣವೇ ಆಸ್ಪತ್ರೆಗೆ ಸೇರಿಸಿ ಸದಾ ಕೋಮು ಗಲಭೆಗಳಿಂದ ತತ್ತರಿಸಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮು ಸಾಮರಸ್ಯ ಇನ್ನೂ ಜೀವಂತವಾಗಿದೆ ಎನ್ನುವುದನ್ನು ಸಾಬೀತುಪಡಿಸುವುದರೊಂದಿಗೆ ಮಾನವೀಯತೆಯ ಮೂಲಕ ಹೀರೋ ಆದರು.
ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು
ಹಿಂದೂವಿನ ಶವ ಮೇಲಕ್ಕೆತ್ತಿದ ಮುಸ್ಲಿಂಗೆ ಸಹಕರಿಸಿದ ಕ್ರಿಶ್ಚಿಯನ್ http://goo.gl/Mehah9
►► ದ.ಕ. ಜಿಲ್ಲೆಯಲ್ಲೊಂದು ಸಾಮರಸ್ಯ ಘಟನೆ: ಮಾನವೀಯತೆಗೆ ಬೆಲೆ ನೀಡಿದ ವ್ಯಕ್ತಿ ಫೇಸ್‌ಬುಕ್ ನಲ್ಲಿ ಹೀರೋ… http://goo.gl/twUtKA