(ನ್ಯೂಸ್ ಕಡಬ) newskadaba.com, ನ.06: ಜೆಡಿಎಸ್, ಬಿಜೆಪಿ ಮೈತ್ರಿಯ ಬೆನ್ನಲ್ಲೇ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಪತನಗೊಳ್ಳಲಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿಕೆ ತೀವ್ರ ಚರ್ಚೆಗೆ ಗ್ರಾಸವಾಗಿದೆ.ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 135 ಸ್ಥಾನ ಗೆದ್ದು, ರಚಿಸಿರುವ ಭರ್ಜರಿ ಬಹುಮತ ಸರ್ಕಾರ ಪತನಗೊಳ್ಳಲಿದೆ ಎಂಬ ಹೇಳಿಕೆಗಳು ಹಲವು ಅನುಮಾನಗಳನ್ನು ಹುಟ್ಟುಹಾಕಿವೆ.
ಸರ್ಕಾರ ರಚನೆಯಾದ ದಿನದಿಂದಲೂ ಅದನ್ನು ಪತನಗೊಳಿಸಲು ನಾನಾ ರೀತಿಯ ಪ್ರಯತ್ನಗಳು ನಡೆಯುತ್ತಲೇ ಇವೆ. ಆದರೆ ಬಿಜೆಪಿಯಲ್ಲಿ ನಾಯಕತ್ವ ಇನ್ನೂ ಸ್ಪಷ್ಟವಾಗದ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಯಶಸ್ವಿಯಾಗಿಲ್ಲ.ಇದಕ್ಕೆ ಎದುರಾಗಿ ಕಾಂಗ್ರೆಸ್ ಹಲವು ಕಡೆ ಆಪರೇಷನ್ ಹಸ್ತ ನಡೆಸಿ ಜೆಡಿಎಸ್, ಬಿಜೆಪಿ ಶಾಸಕರನ್ನು ಸೆಳೆಯಲು ಯತ್ನ ನಡೆಸಿತ್ತು. ಆದರೆ ಅದು ಪೂರ್ಣಗೊಂಡಿಲ್ಲ.
ಈ ಮೊದಲು 2019 ರಲ್ಲಿ ಜೆಡಿಎಸ್, ಕಾಂಗ್ರೆಸ್ ಸರ್ಕಾರವನ್ನು ಆಪರೇಷನ್ ಕಮಲದ ಮೂಲಕ ಬಿಜೆಪಿ ಪತನಗೊಳಿಸಿತ್ತು.ಅದೇ ರೀತಿ ಈ ಮೊದಲು ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರವನ್ನು, ಮಹಾರಾಷ್ಟ್ರದಲ್ಲಿ ಮಹಾವಿಕಾಸ ಅಘಾಡಿ ಸರ್ಕಾರವನ್ನು ಪತನಗೊಳಿಸಲಾಗಿದೆ.
ಸದ್ಯಕ್ಕೆ ಲೋಕಸಭೆ ಚುನಾವಣೆ ಇರುವುದರಿಂದಾಗಿ ರಾಜ್ಯ ಕಾಂಗ್ರೆಸ್ ಸರ್ಕಾರ ಗಟ್ಟಿಯಾಗಿದೆ. ಇಲ್ಲವಾಗಿದ್ದರೆ ಈ ವೇಳೆಗೆ ಅದನ್ನು ಪತನಗೊಳಿಸಲಾಗುತ್ತಿತ್ತು ಎಂಬ ವ್ಯಾಖ್ಯಾನಗಳಿವೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮರಳಿ ಅಧಿಕಾರಕ್ಕೆ ಬಂದರೆ ಕಾಂಗ್ರೆಸ್ ಅಸ್ತಿತ್ವಕ್ಕೆ ಕಂಠಕವಾಗುವುದು ಶತಸಿದ್ಧ ಎಂದು ಈಗಾಗಲೇ ಹಲವು ನಾಯಕರು ಬಹಿರಂಗ ಹೇಳಿಕೆ ನೀಡಿದ್ದಾರೆ.












