(ನ್ಯೂಸ್ ಕಡಬ) newskadaba.com, ನ.07 ಬೆಂಗಳೂರು : ರಾಜ್ಯವನ್ನು ಜಾಗತಿಕ ನಾವೀನ್ಯತಾ ಕೇಂದ್ರವಾಗಿ ಬಲಪಡಿಸುವ ಮಹತ್ವಾಕಾಂಕ್ಷೆಯೊಂದಿಗೆ ರೂಪಿಸಿರುವ ‘ಕರ್ನಾಟಕ ನವೋದ್ಯಮ ನೀತಿ- 2025-2030’ಕ್ಕೆ ಗುರುವಾರ ನಡೆದ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಿದ್ದು, ನೀತಿಯಡಿ ಮುಂದಿನ 5 ವರ್ಷದಲ್ಲಿ 25,000 ಸ್ಟಾರ್ಟ್ ಅಪ್ ಹುಟ್ಟು ಹಾಕುವ ಗುರಿ ಹೊಂದಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ನೀತಿಗೆ ಅನುಮೋದನೆ ನೀಡಿದ್ದು, ಈ ಹೊಸ ನೀತಿ ಮುಂದಿನ ಐದು ವರ್ಷಗಳಲ್ಲಿ ರಾಜ್ಯದಲ್ಲಿ 25,000 ಹೊಸ ಸ್ಟಾರ್ಟ್ಅಪ್ಗಳನ್ನು ಹುಟ್ಟು ಹಾಕುವ ಗುರಿ ಹೊಂದಿದ್ದು, ಇದಕ್ಕೆ ಪ್ರೋತ್ಸಾಹ ನೀಡಲು 518.27 ಕೋಟಿ ರು. ಅನುದಾನ ಮೀಸಲಿಡಲಾಗಿದೆ.
ನವೋದ್ಯಮ ಕ್ಷೇತ್ರದಲ್ಲಿ ಮುಂಚೂಣಿ ಸ್ಥಾನಕ್ಕೆ
ಈ ಬಗ್ಗೆ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್, ರಾಜ್ಯವನ್ನು ನವೋದ್ಯಮ ಕ್ಷೇತ್ರದಲ್ಲಿ ಮುಂಚೂಣಿ ಸ್ಥಾನಕ್ಕೆ ಕೊಂಡೊಯ್ಯಲು ನೀತಿ ಸಹಕಾರಿ. ಬೆಂಗಳೂರಿನ ಹೊರಗೂ ನಾವೀನ್ಯತೆ ವಿಸ್ತರಿಸಲು ವಿಶೇಷ ಒತ್ತು ನೀಡಲಾಗುತ್ತದೆ.. ರಾಜ್ಯದ ಯಶಸ್ವಿ ಸ್ಟಾರ್ಟ್ಅಪ್ ಪರಿಸರ ವ್ಯವಸ್ಥೆಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲು ಈ ನೀತಿ ರೂಪಿಸಲಾಗಿದೆ ಎಂದರು.












