(ನ್ಯೂಸ್ ಕಡಬ) newskadaba.com ಕಡಬ, ಎ.30. ವಿವಾಹ ಎನ್ನುವುದು ಜೀವನದ ಮಹತ್ವದ ಕರ್ಮವಾಗಿದ್ದು, ಆಡಂಬರಗಳಿಲ್ಲದೆ, ಸರಳವಾಗಿ ನಡೆಯುವ ಮದುವೆಯಲ್ಲಿ ಅಲ್ಲಾಹನ ಅನುಗ್ರಹ ಇರುತ್ತದೆ ಎಂದು ಕಾಜೂರಿನ ಸಯ್ಯದ್ ಝೈನುಲ್ ಆಬಿದೀನ್ ಜಮಲುಲ್ಲೈಲಿ ತಂಙಳ್ ಹೇಳಿದರು.
ಅವರು ಮರ್ಧಾಳದ ಪ್ರವಾಸಿ ಸಂಘಟನೆಯಾದ ನುಸ್ರತ್ತುಲ್ ಇಸ್ಲಾಂ ಇಂಟರ್ನ್ಯಾಷನಲ್ ಯೂತ್ ಫೆಡರೇಶನ್ ವತಿಯಿಂದ ಭಾನುವಾರದಂದು ಮರ್ಧಾಳ ತಕ್ವೀಯತ್ತುಲ್ ಇಸ್ಲಾಂ ಮಸೀದಿಯಲ್ಲಿ ನಡೆದ ಮರ್ಧಾಳ ಜಮಾಅತಿಗೊಳಪಟ್ಟ ಬಡ ಯತೀಮ್ ಹೆಣ್ಣಿನ ಮದುವೆಯ ನಿಖಾಹ್ ನೆರವೇರಿಸಿ ಮಾತನಾಡಿದರು. ವಿವಾಹ ಸಮಾರಂಭದಲ್ಲಿ ನಮ್ಮ ಅರ್ಹತೆಗೆ ತಕ್ಕಷ್ಟು ಅತಿಥಿಗಳನ್ನು ಬರಮಾಡಿಕೊಂಡು ಸತ್ಕರಿಸಿದಾಗ ವಿವಾಹವು ಪರಿಪೂರ್ಣವಾಗುತ್ತದೆ. ಪಾಶ್ಚಿಮಾತ್ಯ ಸಂಸ್ಕೃತಿಗಳಿಗೆ ಮಾರುಹೋಗದೆ ಇಸ್ಲಾಂ ನೀಡಿದ ಮಾರ್ಗದರ್ಶನದಂತೆ ಮುನ್ನಡೆದಲ್ಲಿ ಖಂಡಿತಾ ಅಲ್ಲಾಹನ ಸಹಾಯ ಸಿಗಲಿದೆ ಎಂದರು.
ಇದೇ ಸಂದರ್ಭದಲ್ಲಿ ಪ್ರಸಕ್ತ ವರ್ಷದಿಂದ ನೂತನವಾಗಿ ಆರಂಭಗೊಳ್ಳಲಿರುವ ಶರೀಅತ್ ಕಾಲೇಜಿನ ದಾಖಲಾತಿಗೆ ಚಾಲನೆ ನೀಡಿದರು. ಮರ್ಧಾಳ ಜಮಾಅತ್ ಕಮಿಟಿಯ ಅಧ್ಯಕ್ಷರಾದ ಸಯ್ಯದ್ ಶಾಹುಲ್ ಹಮೀದ್ ತಂಙಳ್, ಉಪಾಧ್ಯಕ್ಷರಾದ ಇಬ್ರಾಹಿಂ ಮುಸ್ಲಿಯಾರ್, ಖತೀಬರಾದ ಹನೀಫ್ ಸಖಾಫಿ ಎಮ್ಮೆಮ್ಮಾಡು, ಕಾರ್ಯದರ್ಶಿ ಹನೀಫ್, ಯಂಗ್ ಮೆನ್ಸ್ ಅಧ್ಯಕ್ಷ ಅಬ್ಬಾಸ್, ಕಾರ್ಯದರ್ಶಿ ರಿಯಾಝ್ ಮುಸ್ಲಿಯಾರ್ ಮೊದಲಾದವರು ಉಪಸ್ಥಿತರಿದ್ದರು.