ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ 47 ನೇ ವರ್ಷದ ಸಾಮೂಹಿಕ ವಿವಾಹ ಸಮಾರಂಭ ► ಪರಸ್ಪರ ನಂಬಿಕೆಯಿದ್ದಲ್ಲಿ ವಿಚ್ಚೇದನಕ್ಕೆ ಕಡಿವಾಣ ಹಾಕಬಹುದು: ವೀರೇಂದ್ರ ಹೆಗ್ಗಡೆ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಎ.29. ಸಂತೋಷ, ಸಂಭ್ರಮ, ಪ್ರೀತಿಯಿಂದ ಮಾಡುವ ಸಮಾರಂಭಗಳಲ್ಲಿ ವಿವಾಹವೂ ಒಂದಾಗಿದ್ದು, ಜೀವನದ ಪ್ರತೀಕ ಆದರ್ಶ ಎಂದು ಭಾವಿಸುತ್ತಿರುವ ನಾವು ದಾಂಪತ್ಯಕ್ಕೆ ವಿಶೇಷವಾದ ಗೌರವವನ್ನು ನೀಡಿದ್ದೇವೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.

ಅವರು ಭಾನುವಾರದಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ನಡೆದ 47 ನೇ ವರ್ಷದ ಸಾಮೂಹಿಕ ಉಚಿತ ವಿವಾಹ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿ, ಇಲ್ಲಿ 23 ಜೋಡಿಗಳು ಅಂತರ್ಜಾತಿಯ ವಿವಾಹವಾಗಿದ್ದು, ಅವರು ಸರಕಾರದ ವಿವಿಧ ಸೌಲಭ್ಯಗಳನ್ನು ಪಡೆಯುವಂತಾಗಬೇಕು ಎನ್ನುವ ಉದ್ದೇಶದಿಂದ ಅವರಿಗೆ ಸರಕಾರದ ನೋಂದಣಿ ಮಾಡಿಕೊಳ್ಳುವ ವಿಶೇಷ ವ್ಯವಸ್ಥೆಯನ್ನು ಮಾಡಲಾಗಿದೆ. ಒಟ್ಟು 131 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟಿವೆ. ದಾಂಪತ್ಯವನ್ನು ಪಾವಿತ್ರ್ಯತೆ, ಗೌರವ, ಪರಸ್ಪರ ತಿಳುವಳಿಕೆಯಿಂದ, ನಂಬಿಕೆಯಿಂದ ಮುಂದುವರಿಸಿಕೊಂಡು ಹೋದಲ್ಲಿ ವಿಚ್ಛೇದನದ ಪ್ರಶ್ನೆ ಬರಲಾರದು. ಎಲ್ಲರೂ ಹೊಂದಿಕೊಂಡು, ಪ್ರೀತಿಯಿಂದ, ಆದರಿಂದ ಜೀವನ ಸಾಗಿಸುವಂತಾಗಲಿ ಎಂದು ಹಾರೈಸಿದರು.‌ ವೀರೇಂದ್ರ ಹೆಗ್ಗಡೆ ಹಾಗೂ ಹೇಮಾವತಿ ಹೆಗ್ಗಡೆಯವರು ವಧು ವರರಿಗೆ ಮಾಂಗಲ್ಯಗಳನ್ನು ವಿತರಿಸಿದರು. ಕನ್ನಡ ಚಲನ ಚಿತ್ರನಟ ಕಿಚ್ಚ ಸುದೀಪ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ವಧುವರರನ್ನು ಆಶೀರ್ವದಿಸಿದರು.

Also Read  ಬೈಕುಗಳಿಗೆ 50 ರೂ., ಕಾರುಗಳಿಗೆ 200 ರೂ., ಇದು ಯಾವುದೋ ಟೋಲ್ ದುಡ್ಡಲ್ಲ ► ಪೆರಿಯಶಾಂತಿಯಲ್ಲಿ ಮರ ತೆರವಿನ ನೆಪದಲ್ಲಿ ಹಗಲು ದರೋಡೆಯ ವೀಡಿಯೋ ವೈರಲ್

error: Content is protected !!
Scroll to Top