(ನ್ಯೂಸ್ ಕಡಬ) newskadaba.com, ಅ. 31 ಕಡೂರು :ರಾಜ್ಯದಲ್ಲಿ ಹೊಸ ಪಾಲಿಟೆಕ್ನಿಕ್ ಕಾಲೇಜು ತೆರೆಯಲು ಜನಪ್ರತಿನಿಧಿಗಳಿಂದ ಒತ್ತಡ ಇದೆ. ಅವಶ್ಯಕತೆಗೆ ಅನುಗುಣವಾಗಿ ನೀಡಲಾಗುತ್ತದೆ. ಒಂದು ಪಾಲಿಟೆಕ್ನಿಕ್ ತೆರೆಯಲು ಕನಿಷ್ಠ ₹22 ಕೋಟಿ ಬೇಕು ಎಂದು ರಾಜ್ಯ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ತಿಳಿಸಿದರು. ಪಟ್ಟಣದಲ್ಲಿ ನಿರ್ಮಾಣವಾಗಿರುವ ನೂತನ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಕಟ್ಟಡವನ್ನು ಲೋಕಾರ್ಪಣೆ ಮಾಡಿ ಮಾತನಾಡಿ, ರಾಜ್ಯದಲ್ಲಿ ಈಗಾಗಲೆ 107 ಪಾಲಿಟೆಕ್ನಿಕ್ ಕಾಲೇಜು ಗಳು ಕಾರ್ಯ ನಿರ್ವಹಿಸುತ್ತಿವೆ. ಗರಿಷ್ಠ 16 ಕೋರ್ಸ್ ಗಳು ಸಹ ಇವೆ ಅದರೆ ಕನಿಷ್ಠ ನಾಲ್ಕು ಕೋರ್ಸ್ ಗಳು ಪ್ರತಿಯೊಂದು ಕಾಲೇಜುಗಳಲ್ಲಿ ಇರುವಂತೆ ಮಾನದಂಡ ರೂಪಿಸಲಾಗಿದೆ ಎಂದರು.
ಈ ಕಾಲೇಜಿನಲ್ಲಿರುವ 3 ಕೋರ್ಸ್ ಗಳ ಜೊತೆಗೆ ಇನ್ನು 3 ಕೋರ್ಸ್ ಆರಂಭಿಸಲು ಅದರಲ್ಲೂ ಮೆಕ್ಯಾನಿಕಲ್ ವಿಭಾಗಕ್ಕೆ ಬೇಡಿಕೆ ಹೆಚ್ಚಿದ್ದು ತಾವು ಪರಿಶೀಲಿಸುವುದಾಗಿ ಹೇಳಿದ ಅವರು ಕಾಲೇಜುಗಳಿಗೆ ಕಾಂಪೌಂಡ್ ನಿರ್ಮಿಸಲು ನೀಡುತ್ತಿರುವ ಅನುದಾನವನ್ನು ಕಡೂರಿಗೂ ನೀಡುತ್ತೇನೆ ಎಂಬ ಭರವಸೆ ನೀಡಿದರು. ಪಾಲಿಟೆಕ್ನಿಕ್ ಗಳಿಗೆ ಹಾಸ್ಟೆಲ್ ವ್ಯವಸ್ಥೆ ಇದ್ದು ಅವುಗಳ ನಿರ್ವಹಣೆ ಬಿಸಿಎಂ ಇಲಾಖೆಗೆ ಈಗಾಗಲೇ 128 ಹಾಸ್ಟೆಲ್ಗಳನ್ನು ಹಸ್ತಾಂತರಿಸಲಾಗಿದೆ. ಪ್ರತಿ ವಿದ್ಯಾರ್ಥಿಗೂ ಊಟ ಮತ್ತು ವಸತಿ ಸಿಗಬೇಕು ಹಾಗಾದಲ್ಲಿ ಉತ್ತಮ ಶಿಕ್ಷಣ ಪಡೆಯಲು ಸಾಧ್ಯ ಇದೆ ಎಂದರು.
ಚಿಕ್ಕಮಗಳೂರಿನ ಎಂಜಿನಿಯರ್ ಕಾಲೇಜು ಕಳೆದ 13 ವರ್ಷಗಳ ಹಿಂದೆಯೆ ಮಂಜೂರಾಗಿದ್ದು ನೆನಗುದಿಗೆ ಬಿದ್ದಿದೆ ಯಾಕೆ, ಏನು? ಎಂಬುದನ್ನು ಕೆದಕಲು ಹೋಗಲ್ಲ. ಗುಣ ಮಟ್ಟದ ಶಿಕ್ಷಣ ನಮ್ಮ ಮೊದಲ ಆದ್ಯತೆ. ಕಾಲೇಜು ಎಲ್ಲಿ, ಯಾವ ಸ್ಥಳದಲ್ಲಿ ಮಾಡಬೇಕೆಂಬುದನ್ನು ನಾವು ಮೊದಲು ಅಧ್ಯಯನ ಮಾಡಿ ನಂತರ ಹೊಸ ಕಾಲೇಜು ಗಳಿಗೆ ಅನುಮತಿ ನೀಡುತ್ತೇವೆ. ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುವುದು ನಮ್ಮ ಕರ್ತವ್ಯ ಎಂದರು.












