(ನ್ಯೂಸ್ ಕಡಬ) newskadaba.com, ಅ..29: ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ವೇತನ, ಭತ್ಯೆ ಹೆಚ್ಚಳ ಮೊದಲಾದ ವಿಷಯದಲ್ಲಿ ಸರ್ಕಾರಕ್ಕೆ ಶಿಫಾರಸು ಮಾಡುವ 8ನೇ ವೇತನ ಆಯೋಗದ ಉಲ್ಲೇಖದ ನಿಯಮಗಳಿಗೆ (ಟಿಒಆರ್) ಕೇಂದ್ರ ಸಚಿವ ಸಂಪುಟ ಸಭೆ ಮಂಗಳವಾರ ಒಪ್ಪಿಗೆ ನೀಡಿದೆ.
ಇದರೊಂದಿಗೆ 50 ಲಕ್ಷಕ್ಕೂ ಹೆಚ್ಚು ಕೇಂದ್ರ ಸರ್ಕಾರಿ ನೌಕರರು ಹಾಗೂ 69 ಲಕ್ಷ ನಿವೃತ್ತರ ವೇತನ ಮತ್ತು ಪಿಂಚಣಿ ಪರಿಷ್ಕರಣೆ ಪ್ರಕ್ರಿಯೆಗೆ ಚಾಲನೆ ಸಿಕ್ಕಂತಾಗಿದೆ. ಆಯೋಗದ ಅಧ್ಯಕ್ಷರನ್ನಾಗಿ ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ನ್ಯಾ.ರಂಜನಾ ಪ್ರಕಾಶ್ ದೇಸಾಯಿ ಅವರನ್ನು ಆಯ್ಕೆ ಮಾಡಲಾಗಿದೆ. ಬೆಂಗಳೂರು ಐಐಎಂನ ಪ್ರೊ.ಪುಲಕ್ ಘೋಷ್ ಮತ್ತು ಎಂಪಿಎನ್ಜಿ ಕಾರ್ಯದರ್ಶಿ ಪಂಕಜ್ ಜೈನ್ ಅವರು ಆಯೋಗದ ಸದಸ್ಯರಾಗಿರಲಿದ್ದಾರೆ.
ಜ.1ರಿಂದಲೇ ಶಿಫಾರಸುಗಳು ಜಾರಿಗೆ ಬರುವ ನಿರೀಕ್ಷೆ
ಆಯೋಗ ರಚನೆಯಾದ 18 ತಿಂಗಳೊಳಗಾಗಿ ತನ್ನ ಶಿಫಾರಸ್ಸನ್ನು ಸರ್ಕಾರಕ್ಕೆ ಸಲ್ಲಿಸಲಿದೆ. ಮುಂದಿನ ವರ್ಷ ಜ.1ರಿಂದಲೇ ಶಿಫಾರಸುಗಳು ಜಾರಿಗೆ ಬರುವ ನಿರೀಕ್ಷೆ ಇದೆ. ಈ ವರ್ಷ ಜನವರಿಯಲ್ಲಿ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಎಂಟನೇ ವೇತನ ಆಯೋಗ ಸ್ಥಾಪನೆಗೆ ತಾತ್ವಿಕ ಒಪ್ಪಿಗೆ ನೀಡಲಾಗಿತ್ತು.












