(ನ್ಯೂಸ್ ಕಡಬ) newskadaba.com, ಅ..24: ಇತ್ತೀಚೆಗೆ ಬಿಹಾರದಲ್ಲಿ ಯಶಸ್ವಿಯಾಗಿ ನಡೆಸಲಾದ ವಿಶೇಷ ಮತಪಟ್ಟಿ ಪರಿಷ್ಕರಣೆಯನ್ನು ಇನ್ನೂ 12 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಆಯೋಜಿಸಲಾಗುವುದು ಎಂದು ಕೇಂದ್ರ ಚುನಾವಣಾ ಆಯೋಗ ಸೋಮವಾರ ಪ್ರಕಟಿಸಿದೆ. ನವೆಂಬರ್ 4ರಿಂದ ಆರಂಭವಾಗಲಿರುವ ಈ ಪ್ರಕ್ರಿಯೆ 2026ರ ಫೆ.7ರಂದು ಅಂತಿಮ ಪಟ್ಟಿ ಪ್ರಕಟಣೆಯೊಂದಿಗೆ ಮುಕ್ತಾಯಗೊಳ್ಳಲಿದೆ ಎಂದು ಆಯೋಗ ಮಾಹಿತಿ ನೀಡಿದೆ. ಆದರೆ ಈ ಹಂತದಲ್ಲಿ ಕರ್ನಾಟಕದಲ್ಲಿ ಮತಪಟ್ಟಿ ಪರಿಷ್ಕರಣೆ ನಡೆಯದು.
ಈ ನಡುವೆ ಆಯೋಗದ ಘೋಷಣೆಗೆ ಅಪಸ್ವರವೆತ್ತಿರುವ ಕಾಂಗ್ರೆಸ್, ‘ಇದರಿಂದ ಮತದಾರರಿಗಾಗಲಿ, ವಿಪಕ್ಷಗಳಿಗಾಗಲಿ ತೃಪ್ತಿಯಿಲ್ಲ. ಬಿಹಾರದಲ್ಲಿ ನಡೆದ ಎಸ್ಐಆರ್ ಬಗ್ಗೆ ಕೇಳಲಾದ ಪ್ರಶ್ನೆಗಳಿಗೇ ಇನ್ನೂ ಉತ್ತರ ಸಿಕ್ಕಿಲ್ಲ. ಹೀಗಿರುವಾಗ ಅದನ್ನು ದೇಶವ್ಯಾಪಿ ವಿಸ್ತರಣೆ ಮಾಡುವ ಅವಶ್ಯಕತೆ ಏನಿತ್ತು. ಯಾವುದೇ ಅರ್ಹ ಮತದಾರರನ್ನು ಪಟ್ಟಿಯಿಂದ ಕೈಬಿಡಬಾರದು’ ಎಂದು ಆಗ್ರಹಿಸಿವೆ. ಈ ನಡುವೆ ವಿಪಕ್ಷಗಳನ್ನು ಅತೃಪ್ತ ಆತ್ಮ ಎಂದು ಬಿಜೆಪಿ ವ್ಯಂಗ್ಯವಾಡಿದೆ.












