(ನ್ಯೂಸ್ ಕಡಬ) newskadaba.com, ಅ..24 ಬೆಂಗಳೂರು: ಶಾಲೆಗೆ ಚಕ್ಕರ್ ಹಾಕಿದ್ದಾನೆ ಎಂಬ ಕಾರಣಕ್ಕೆ ವಿದ್ಯಾರ್ಥಿಯ ಮೈಯಲ್ಲಿ ಬಾಸುಂಡೆ ಬರುವಂತೆ ದಂಡಿಸಿದ್ದ ನಗರದ ಖಾಸಗಿ ಶಾಲೆಯ ಶಿಕ್ಷಕ ಮತ್ತು ಪ್ರಾಂಶುಪಾಲರಿಗೆ ಶಿಕ್ಷಣ ಇಲಾಖೆ ನೋಟಿಸ್ ಜಾರಿ ಮಾಡಿದೆ.ಸುಂಕದಕಟ್ಟೆ ಪೈಪ್ಲೈನ್ ರಸ್ತೆಯಲ್ಲಿರುವ ಖಾಸಗಿ ಶಾಲೆಯಲ್ಲಿ 5ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿಯನ್ನು ಶಾಲೆಯ ಶಿಕ್ಷಕರೊಬ್ಬರು ಕೊಠಡಿಯಲ್ಲಿ ಕೂಡಿಹಾಕಿ ಅಮಾನವೀಯವಾಗಿ ದಂಡಿಸಿದ್ದರು.
ಇದಾದ ನಂತರ ಮಗು ವಿಚಿತ್ರವಾಗಿ ವರ್ತಿಸುತ್ತಿದೆ. ಶಾಲೆಗೆ ಹೋಗಲು ಹೆದರುತ್ತಿದೆ ಎಂದು ಮಗುವಿನ ಪೋಷಕರು ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ದೂರು ನೀಡಿದ್ದರು. ಈ ದೂರು ಆಧರಿಸಿ ಇದೀಗ ಶಿಕ್ಷಣ ಇಲಾಖೆಯ ಕೂಡ ಶಿಕ್ಷಕ ಮತ್ತು ಪ್ರಾಂಶುಪಾಲರಿಗೆ ನೋಟಿಸ್ ಜಾರಿ ಮಾಡಿ ಉತ್ತರ ನೀಡುವಂತೆ ಸೂಚಿಸಿದೆ.
ಘಟನೆ ನಂತರ ಉತ್ತರ ವಲಯದ ಉಪ ನಿರ್ದೇಶಕರು ಹಾಗೂ ಇಲಾಖೆಯ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಯ ಚಲನವಲನಗಳನ್ನು ತಿಳಿಯಲು ಶಾಲೆಯಲ್ಲಿವ ಸಿಸಿಟಿವಿ ಕ್ಯಾಮರಾ ದೃಶ್ಯಾವಳಿಗಳನ್ನು ಪರಿಶೀಲಿಸಲಾಗಿದೆ. ಸ್ವತಃ ಮಗು ಮತ್ತು ಪಾಲಕರನ್ನು ಕೂಡ ಭೇಟಿ ಮಾಡಿ ಮಾಹಿತಿ ಸಂಗ್ರಹಿಸಲಾಗಿದೆ. ಎಫ್ಐಆರ್ ದೂರುಗಳಲ್ಲಿನ ಅಂಶಗಳನ್ನು ಸಹ ತಿಳಿಯಲಾಗಿದೆ. ಈ ಎಲ್ಲ ಆಧಾರದಲ್ಲಿ ಶಾಲೆ ಮಾನ್ಯತೆಯನ್ನು ರದ್ದುಗೊಳಿಸಬೇಕಾ ಅಥವಾ ಯಾವ ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂಬುದನ್ನು ತಿಳಿಯಲು ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ಆಯುಕ್ತರಿಗೆ ಪತ್ರ ಬರೆಯಲಾಗಿದೆ .












