(ನ್ಯೂಸ್ ಕಡಬ) newskadaba.com, ಅ.23: ಪಶ್ಚಿಮ ಬಂಗಾಳ ಮೂಲದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಪರಾರಿಯಾಗಿದ್ದ ಮೂವರನ್ನು ಕೆಲವೇ ಗಂಟೆಗಳಲ್ಲಿ ಮಾದನಾಯಕನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.ಗಂಗೊಂಡನಹಳ್ಳಿಯ ಸುತ್ತಮುತ್ತಲಿನ ನಿವಾಸಿಗಳಾದ ಕಾರ್ತಿಕ್, ಗೆಲಿನ್ ಮತ್ತು ನವೀನ್ ಬಂಧಿತ ಆರೋಪಿಗಳು. ಇವರು ಚಾಲಕ ವೃತ್ತಿ ಮಾಡುತ್ತಿದ್ದರು.
ಇವರಿಗೆ ಇನ್ನಿಬ್ಬರು ಸಹಕರಿಸಿದ್ದಾರೆಂಬ ಮಾಹಿತಿ ಲಭ್ಯವಾಗಿದ್ದು, ಪರಾರಿಯಾಗಿರುವ ಅವರುಗಳ ಶೋಧಕಾರ್ಯ ಮುಂದುವರೆದಿದೆ.ಗಂಗೊಂಡನಹಳ್ಳಿಯಲ್ಲಿ ಬಾಡಿಗೆ ಮನೆ ಮಾಡಿಕೊಂಡು ಪಶ್ಚಿಮ ಬಂಗಾಳ ಮೂಲದ ಇಬ್ಬರು ಪುರುಷರು ಹಾಗೂ 35 ವರ್ಷದ ಮಹಿಳೆ ವಾಸವಾಗಿದ್ದಾರೆ.
ಪೊಲೀಸ್ ಮಾಹಿತಿದಾರರೆಂದು ಹೇಳಿಕೊಂಡು ಮಂಗಳವಾರ ರಾತ್ರಿ 9 ಗಂಟೆ ಸುಮಾರಿನಲ್ಲಿ 5 ಮಂದಿಯ ಗುಂಪು ಅವರ ಮನೆಯೊಳಗೆ ಹೋಗಿದ್ದು, ಇಬ್ಬರು ವ್ಯಕ್ತಿಗಳ ಮೇಲೆ ಹಲ್ಲೆ ನಡೆಸಿ ಅವರನ್ನು ಕಟ್ಟಿಹಾಕಿದ್ದಾರೆ. ನಂತರ ಮಹಿಳೆಯನ್ನು ಪಕ್ಕದ ಕೊಠಡಿಗೆ ಎಳೆದೊಯ್ದು ಸಾಮೂಹಿಕ ಅತ್ಯಾಚಾರವೆಸಗಿ ಹಣ, ಮೊಬೈಲ್ ದೋಚಿ ಪರಾರಿಯಾಗಿದ್ದರು.
ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ಥ ಮಹಿಳೆಯ ಸಂಬಂಧಿಯೊಬ್ಬರು ತಕ್ಷಣ 112 ಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಸುದ್ದಿ ತಿಳಿದ ಮಾದನಾಯಕನಹಳ್ಳಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಆರೋಪಿಗಳ ಪತ್ತೆಗಾಗಿ ಹೆಚ್ಚುವರಿ ಎಸ್ಪಿ ನಾಗರಾಜು ನೇತೃತ್ವದಲ್ಲಿ ಮೂರು ತಂಡಗಳನ್ನು ರಚಿಸಲಾಗಿದೆ.
ಈ ತಂಡಗಳು ಕಾರ್ಯಪ್ರವೃತ್ತರಾಗಿ ಬೆಳಗಾಗುವಷ್ಟರಲ್ಲಿ ಮೂವರು ಆರೋಪಿಗಳ ಎಡೆಮುರಿ ಕಟ್ಟಿದ್ದು, ಇನ್ನಿಬ್ಬರಿಗಾಗಿ ತನಿಖೆ ಮುಂದುವರೆದಿದೆ.ಹಲ್ಲೆಗೊಳಗಾಗಿದ್ದ ಇಬ್ಬರು ವ್ಯಕ್ತಿಗಳು ನಿಮಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯ ದಿಂದ ಪಾರಾಗಿದ್ದಾರೆ.












