(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಎ.27. ಅಗ್ರಹಾರ ಧರ್ಮಕ್ಷೇತ್ರದಿಂದ ಬಿಡುಗಡೆಗೊಂಡು 1889 ರಲ್ಲಿ ಸ್ವತಂತ್ರ ಧರ್ಮಕ್ಷೇತ್ರವಾಗಿ ಅಸ್ತಿತ್ವಕ್ಕೆ ಬಂದ ಮಡಂತ್ಯಾರು ಸೇಕ್ರೆಡ್ ಹಾರ್ಟ್ ಇಗರ್ಜಿಯ ಶತಮಾನೋತ್ತರ ಬೆಳ್ಳಿಹಬ್ಬವು ಮೇ 02 ರಂದು ನಡೆಯಲಿದೆ.
ಮೇ 01 ರಂದು ಸಂಜೆ 4 ಗಂಟೆಗೆ ಮಡಂತ್ಯಾರು ಪೇಟೆಯಿಂದ ಹೊರೆಕಾಣಿಕೆ ಮೆರವಣಿಗೆ ನಡೆಯಲಿದ್ದು, ಬಳಿಕ ವಿಶೇಷ ಬಲಿಪೂಜೆಯನ್ನು ಮಂಗಳೂರು ಧರ್ಮ ಪ್ರಾಂತ್ಯದ ಕಾನೂನು ಮತ್ತು ನ್ಯಾಯ ವಿಭಾಗದ ಮುಖ್ಯಸ್ಥ ವಂ| ವಾಲ್ಟರ್ ಡಿ’ಮೆಲ್ಲೊ ನೆರವೇರಿಸಲಿದ್ದಾರೆ. ಮೇ 2 ರಂದು ಬೆಳಗ್ಗೆ 9 ಗಂಟೆಗೆ ಬಲಿಪೂಜೆಯೊಂದಿಗೆ ಸಂಭ್ರಮಾಚರಣೆ ಆರಂಭಗೊಳ್ಳಲಿದೆ. ಐವರು ಬಿಷಪರು, 50 ಕ್ಕೂ ಹೆಚ್ಚು ಧರ್ಮಗುರುಗಳು ಮತ್ತು 3,000ಕ್ಕೂ ಹೆಚ್ಚು ಭಕ್ತರ ಸಮ್ಮುಖದಲ್ಲಿ ಪೂಜೆ ನಡೆಯಲಿದ್ದು, ಪೂಜಾ ವಿಧಿ ವಿಧಾನಗಳನ್ನು ಮಂಗಳೂರು ಬಿಷಪ್ ವಂ| ರೆ| ಡಾ| ಅಲೋಶಿಯಸ್ ಡಿ’ಸೋಜಾ ನಿರ್ವಹಿಸುವರು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಷಪ್ ರೆ| ಡಾ| ಅಲೋಶಿಯಸ್ ಡಿ’ಸೋಜಾ ವಹಿಸುವರು. ಮುಖ್ಯ ಅತಿಥಿಗಳಾಗಿ ಪಾಟ್ನ ಧರ್ಮಪ್ರಾಂತದ ರೆ| ಡಾ| ವಿಲಿಯಂ ಡಿ’ಸೋಜಾ ಎಸ್.ಜೆ., ಬೆಳ್ತಂಗಡಿ ಬಿಷಪ್ ರೆ| ಡಾ| ಲಾರೆನ್ಸ್ ಮುಕ್ಕುಯಿ, ಬಳ್ಳಾರಿ ಬಿಷಪ್ ರೆ| ಡಾ| ಹೆನ್ರಿ ಡಿ’ಸೋಜಾ, ಪುತ್ತೂರು ಬಿಷಪ್ ರೆ| ಡಾ| ಗೀವರ್ಗೀಸ್ ಮಾರ್ ಮಕಾರಿಯೋಸ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿರಲಿದ್ದಾರೆ.
ಈ ಸಂದರ್ಭದಲ್ಲಿ ಚರ್ಚ್ ಆವರಣದಲ್ಲಿ ಸುಮಾರು 300 ಮೀಟರ್ ಉದ್ದದ ಧ್ಯಾನ ಗುಹೆ ಅನಾವರಣಗೊಳ್ಳಲಿದೆ.