ವಿಟ್ಲ ಪೊಲೀಸರ ಮೇಲೆ ದಾಂಧಲೆ ನಡೆಸಿದ್ದ ನಾಲ್ವರ ಬಂಧನ ► ಆರೋಪಿಗಳಿಗೆ ಉರುಳಾದ ತಾವೇ ತೆಗೆದ ಗೂಂಡಾ ಕೃತ್ಯದ ವೀಡಿಯೋ

(ನ್ಯೂಸ್ ಕಡಬ) newskadaba.com
ವಿಟ್ಲ, ಎ.26. ಪೊಲೀಸ್ ಇಲಾಖೆಗೆ ಸೇರಿದ ಬೊಲೆರೋ ವಾಹನವನ್ನು ಅಡ್ಡಗಟ್ಟಿ ಸಿಬ್ಬಂದಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ ಬಾಲಾಪರಾಧಿ ಸಹಿತ ನಾಲ್ವರು ಆರೋಪಿಗಳನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಪೈವಳಿಕೆ ಗ್ರಾಮದ ಸುಂಕದಕಟ್ಟೆ ನಿವಾಸಿಗಳಾದ ಕುಂಞ ಅಹಮ್ಮದ್‌ ಎಂಬವರ ಪುತ್ರ ರಾಝಿಕ್ ಎ.ಕೆ.(20), ಮೊಹಮ್ಮದ್‌ ಎಂಬವರ ಪುತ್ರ ನೌಫಲ್(19), ಅಬ್ದುಲ್ಲ ಎಂಬವರ ಪುತ್ರ ಹೈದರಾಲಿ(36) ಹಾಗೂ 17ರ ಹರೆಯದ ಓರ್ವ ಅಪ್ರಾಪ್ತ ಬಾಲಕ ಎಂದು ಗುರುತಿಸಲಾಗಿದೆ. ಆರೋಪಿಗಳು ಇತ್ತೀಚೆಗೆ ಜಮ್ಮು ಕಾಶ್ಮೀರದ ಕಥುವಾದ ಬಾಲಕಿ ಆಸಫಾಳ ಹತ್ಯೆಯನ್ನು ಖಂಡಿಸಿ ಕೇರಳದಲ್ಲಿ ನಡೆದ ಹರತಾಳದ ಸಂದರ್ಭದಲ್ಲಿ ಕರ್ನಾಟಕ – ಕೇರಳ ಗಡಿ ಪ್ರದೇಶವಾದ ಆನೇಕಲ್ ಎಂಬಲ್ಲಿ ತಂಡವೊಂದು ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸುತ್ತಿದ್ದ ಸಂದರ್ಭದಲ್ಲಿ ಬಲಾತ್ಕಾರದ ಬಂದನ್ನು ವಿಚಾರಿಸಿದ್ದಕ್ಕಾಗಿ ಕೊಳ್ನಾಡು ಬಿಜೆಪಿ ಶಕ್ತಿಕೇಂದ್ರದ ಪ್ರಧಾನ ಕಾರ್ಯದರ್ಶಿ ಹರೀಶ್ ರವರಿಗೆ ತಂಡವು ಹಲ್ಲೆ ನಡೆಸಿದ್ದು, ಈ ಬಗ್ಗೆ ಹರೀಶ್ ರವರು ನೀಡಿದ ದೂರಿನಂತೆ ವಿಟ್ಲ ಪೊಲೀಸರು ಸ್ಥಳಕ್ಕೆ ತೆರಳಿದಾಗ ಪೊಲೀಸರಿಗೇ ದಿಗ್ಬಂಧನ ವಿಧಿಸಿದ್ದ ಯುವಕರ ತಂಡ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ, ಪೊಲೀಸರ ಮೊಬೈಲ್ ಗಳನ್ನು ಕಸಿದು ದೃಶ್ಯಾವಳಿಗಳನ್ನು ಬಲವಂತವಾಗಿ ಅಳಿಸಿ ಹಾಕಿತ್ತು. ಪೊಲೀಸರನ್ನು ಬೊಲೆರೋದಿಂದ ಹೊರಗಿಳಿಯಲು ಬಿಡದೆ ವಾಹನಕ್ಕೆ ಕೆಸರು ಎರಚಿ ಹಾನಿಗೊಳಿಸಿ ತಮ್ಮ ಪೌರುಷವನ್ನು ತೋರಿಸಿದ್ದರು‌.

ಆದರೆ ತಾವು ಮಾಡುತ್ತಿರುವ ಕೃತ್ಯವನ್ನು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದು, ಕ್ಷಣಮಾತ್ರದಲ್ಲಿ ವೈರಲ್ ಆಗಿತ್ತು. ಯುವಕರ ಗೂಂಡಾ ವರ್ತನೆಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿತ್ತಲ್ಲದೆ ಯುವಕರು ವೀಡಿಯೋ ಮಾಡಿ ಹರಿಯಬಿಟ್ಟು ತಾವೇ ತೋಡಿದ ಗುಂಡಿಗೆ ತಾವೇ ಬಲಿಯಾಗಿದ್ದಾರೆ. ಆರೋಪಿಗಳ ಪತ್ತೆಗೆ ವೈರಲಾದ ದೃಶ್ಯಗಳು ಪ್ರಮುಖ ಸಾಕ್ಷಿಗಳಾಗಿದ್ದು, ಈ ಬಗ್ಗೆ ವಿಟ್ಲ ಠಾಣಾ ಎಸ್.ಐ ಚಂದ್ರಶೇಖರ್ ಸಿ.ಎಲ್‌ ನೀಡಿದ ದೂರಿನಂತೆ ಮಂಜೇಶ್ವರ ಠಾಣಾ ಎಸ್.ಐ ಅನೂಪ್ ಕುಮಾರ್‌ರವರ ನೇತೃತ್ವದ ಪೊಲೀಸರ ತಂಡ ಆರೋಪಿಗಳ ಪೈಕಿ ನಾಲ್ವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಬಂಧಿತ ಆರೋಪಿಗಳನ್ನು ಕಾಸರಗೋಡಿನ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಇನ್ನುಳಿದ ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ.

error: Content is protected !!

Join the Group

Join WhatsApp Group