ಮರಳು ಮತ್ತು ಕೆಂಪು ಕಲ್ಲು ಸಮಸ್ಯೆ ಪರಿಹರಿಸಲು ಒತ್ತಾಯಿಸಿ ಕಟ್ಟಡ ಕಾರ್ಮಿಕ ಫೆಡರೇಶನ್ ಬೃಹತ್ ಪ್ರತಿಭಟನೆ



(ನ್ಯೂಸ್ಕಡಬ) newskadaba.com ಅ. 14. ದಕ್ಷಿಣ ಕನ್ನಡ ಜಿಲ್ಲೆಯ ಕೆಂಪು ಕಲ್ಲು ಮತ್ತು ಮರಳು ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಒತ್ತಾಯಿಸಿ ಇಂದು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಬೃಹತ್ ಮೆರವಣಿಗೆ ಮತ್ತು ಪ್ರತಿಭಟನೆಯು ಮಂಗಳೂರಿನ ಜ್ಯೋತಿ ಅಂಬೇಡ್ಕರ್ ವೃತ್ತದಿಂದ ಮಿನಿ ವಿಧಾನಸೌಧದ ತನಕ ನಡೆಯಿತು.





ಪ್ರತಿಭಟನಾ ಪ್ರದರ್ಶನವನ್ನು ಉದ್ಘಾಟಿಸುತ್ತಾ ಫೆಡರೇಶನ್ ರಾಜ್ಯ ಸಮಿತಿಯ ಕಾರ್ಯದರ್ಶಿ ಯೋಗೀಶ್ ಜಪ್ಪಿನಮೊಗರು ಮಾತನಾಡುತ್ತಾ, ಲಕ್ಷಾಂತರ ಜನತೆಗೆ ಸಂಬಂಧಿಸಿ ಆಳುವ ಪಕ್ಷ ಮತ್ತು ವಿರೋಧ ಪಕ್ಷಗಳು ನಾಟಕ ಮಾಡುತ್ತಿರುವುದು ಖಂಡನೀಯ. ಕಳೆದ ಮೂರುವರೆ ತಿಂಗಳಿನಿಂದ ಈ ಸಮಸ್ಯೆಯನ್ನು ಪರಿಹರಿಸದೆ ಇರುವುದು ಆಕ್ಷೇಪಾರ್ಹವಾಗಿದೆ. ಕೆಲಸ ಕಳೆದುಕೊಂಡು ತೊಂದರೆಗೊಳಗಾದ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರು ಒಂದು ಕಡೆಯಾದರೆ ಮನೆ ಕಟ್ಟಲು ಸಾಧ್ಯವಾಗದೆ ಕಚ್ಛಾ ವಸ್ತುಗಳಿಗೆ ವಿಪರೀತ ಬೆಲೆ ತೆರಬೇಕಾದ ಜನಸಾಮಾನ್ಯರ ಪರಿಸ್ಥಿತಿ ಚಿಂತಾಜನಕವಾಗಿದೆ.






ಆಳುವ ಪಕ್ಷದವರು ಸಮಸ್ಯೆ ಇತ್ಯರ್ಥವಾಗಿದೆ ಎಂದು ಡಂಗುರ ಸಾರುತ್ತಿದ್ದಾರೆ. ಇದರ ಲಾಭವನ್ನು ಅನಧಿಕೃತ ವ್ಯಕ್ತಿ ಸಂಸ್ಥೆಗಳು ಪಡೆಯುವಂತಾಗಿದೆ. ಏರಿಕೆಯಾದ ಕೆಂಪು ಕಲ್ಲಿನ ದರ ಮತ್ತು ಮರಳಿನ ದರವನ್ನು ಜನಪರವಾಗಿ ನಿರ್ಧರಿಸಲು ಜಿಲ್ಲಾಧಿಕಾರಿಗಳು ಮಧ್ಯಪ್ರವೇಶಿಸಬೇಕೆಂದು ಕೇಳಿಕೊಂಡು ಒತ್ತಾಯಿಸಿ ಹತ್ತು ದಿನಗಳಾದರೂ ದಿವ್ಯ ಮೌನವೇ ಉತ್ತರವಾಗಿದೆ. ಸಾಮಾನ್ಯ ಜನರ ತಾಳ್ಮೆಗೂ ಮಿತಿ ಇರಲಿ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದರು.
ಸಮಸ್ಯೆ ಶಾಶ್ವತ ಪರಿಹಾರವಾಗುವ ತನಕ ಕಲ್ಯಾಣ ಮಂಡಳಿಯಿಂದ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ತಲಾ ಮಾಸಿಕವಾಗಿ ರೂ.ಹತ್ತು ಸಾವಿರದಂತೆ ಪರಿಹಾರ ಮೊತ್ತ ನೀಡಬೇಕೆಂದು ಒತ್ತಾಯಿಸಿದರು.

error: Content is protected !!
Scroll to Top