(ನ್ಯೂಸ್ ಕಡಬ) newskadaba.com ಅ. 14. ಖ್ಯಾತ ಹಾಸ್ಯನಟ ರಾಜು ತಾಳಿಕೋಟೆ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನಲ್ಲಿ ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ಅವರಿಗೆ ಭಾನುವಾರದಂದು ರಾತ್ರಿ 11:59ರ ವೇಳೆಗೆ ವಿಶ್ರಾಂತಿಯಲ್ಲಿದ್ದ ಸಂದರ್ಭ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದೆ. ನಂತರ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಆಸ್ಪತ್ರೆಗೆ ಕರೆ ತರಲಾಗಿತ್ತು. ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆಗೆ ಸ್ಪಂದಿಸದೇ ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ.
ಮೂಲತಃ ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಚಿಕ್ಕಸಿಂದಗಿ ಗ್ರಾಮದವರಾಗಿದ್ದ ಅವರು, ಚಲನಚಿತ್ರದಲ್ಲಿ ಪ್ರಸಿದ್ಧರಾದ ನಂತರ ತಾಳಿಕೋಟೆ ನಗರದಲ್ಲಿ ವಾಸವಾಗಿದ್ದರು. ರಾಜು ತಾಳಿಕೋಟೆಯವರು ಮೊದಲ ಹೆಸರು ರಾಜೇಸಾಬ ಮಕ್ತುಮಸಾಬ್ ತಾಳಿಕೋಟೆ. ಅವರು ಕೇವಲ ನಟನಾಗಿರದೇ ತಾಳಿಕೋಟೆಯ ಪ್ರಸಿದ್ಧ ಖಾಸ್ಗತೇಶ್ವರ ನಾಟಕ ಮಂಡಳಿಯ ಮಾಲೀಕರಾಗಿದ್ದರು. ರಾಜು ತಾಳಿಕೋಟೆಯವರ ನಿಧನಕ್ಕೆ ಕನ್ನಡ ಚಿತ್ರರಂಗ ಮತ್ತು ಉತ್ತರ ಕರ್ನಾಟಕದ ರಂಗಭೂಮಿ ಕಂಬನಿ ಮಿಡಿದಿದೆ.
ನಿರ್ದೇಶಕ ಯೋಗರಾಜ್ ಭಟ್ ಅವರ ‘ಮನಸಾರೆ’ (2009) ಚಿತ್ರದ ಮೂಲಕ ಅವರು ಜನಪ್ರಿಯತೆ ಗಳಿಸಿದರು. ಬಳಿಕ ‘ಪಂಚರಂಗಿ’, ‘ಮತ್ತೊಂದ್ ಮದುವೇನಾ..!’ ಮತ್ತು ‘ಮೈನಾ’ ಸೇರಿದಂತೆ ಹಲವಾರು ಚಿತ್ರಗಳಲ್ಲಿ ತಮ್ಮದೇ ಆದ ವಿಶಿಷ್ಟ ಹಾಸ್ಯ ಶೈಲಿಯ ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದರು. ಬಿಗ್ ಬಾಸ್ ಸೀಸನ್ 7ರಲ್ಲಿ ಅವರು ಸ್ಪರ್ಧಿಯಾಗಿ ಭಾಗವಹಿಸಿದ್ದರು.















