(ನ್ಯೂಸ್ ಕಡಬ) newskadaba.com ಕಡಬ, ಎ.24. ಹನಿ ಹನಿಯಾಗಿ ತೊಟ್ಟಿಕ್ಕುವ ನೀರು… ಅದನ್ನು ಸಂಗ್ರಹಿಸಲು 24 ಗಂಟೆಗಳ ಕಾಲ ಕಾಯುವ ಪರಿಸ್ಥಿತಿ… ಮೂಲಭೂತ ಸೌಕರ್ಯಗಳಲ್ಲೊಂದಾದ ಕುಡಿಯಲು ನೀರಿಲ್ಲದೆ ಕಲುಷಿತ ನೀರನ್ನೇ ಕುಡಿಯುವ ಪರಿಸ್ಥಿತಿ… ಇದು ಕಂಡುಬಂದಿರೋದು ಕಡಬ ತಾಲೂಕಿನ ಐತ್ತೂರು ಗ್ರಾಮದ ಕಲ್ಲಾಜೆ ಕಾಲನಿಯಲ್ಲಿ.
ಸುಮಾರು ಐವತ್ತಕ್ಕೂ ಹೆಚ್ಚು ಮನೆಗಳಿರುವ ಈ ಕಾಲನಿಯಲ್ಲಿ ಕರ್ನಾಟಕ ರಾಜ್ಯ ರಬ್ಬರ್ ಅಭಿವೃದ್ಧಿ ನಿಗಮದ ವತಿಯಿಂದ ಹಾಗೂ ಐತ್ತೂರು ಗ್ರಾಮ ಪಂಚಾಯತ್ ವತಿಯಿಂದ ತಲಾ ಒಂದರಂತೆ ಒಟ್ಟು ಎರಡು ಬೋರ್ವೆಲ್ಗಳಿದ್ದರೂ ಕಳೆದ ಹನ್ನೊಂದು ದಿನಗಳಿಂದ ಒಂದು ತೊಟ್ಟು ನೀರು ಕೂಡಾ ಉಪಯೋಗಕ್ಕೆ ದೊರಕಿಲ್ಲ. ಪಂಚಾಯತ್ ವತಿಯಿಂದ ಇರುವ ಕೊಳವೆ ಬಾಯಿಯ ಪಂಪ್ ಸೆಟ್ಟನ್ನು ಕೆಲವು ದಿನಗಳ ಹಿಂದೆ ರಿಪೇರಿಗೆಂದು ಮೇಲಕ್ಕೆತ್ತಲಾಗಿದ್ದು, ಆ ನಂತರ ಸಂಪರ್ಕ ಕಲ್ಪಿಸಲಾಗಿರಲಿಲ್ಲ. ರಬ್ಬರ್ ನಿಗಮದ ಬೋರ್ವೆಲ್ ಪಂಪ್ ಹನ್ನೊಂದು ದಿನಗಳ ಹಿಂದೆ ಬಂದ ಹೈವೋಲ್ಟೇಜ್ ಸಮಸ್ಯೆಯಿಂದಾಗಿ ಕೇಡಾಗಿದ್ದು, ಸಂಬಂಧಪಟ್ಟವರು ಇನ್ನೂ ರಿಪೇರಿ ಮಾಡುವ ಗೋಜಿಗೇ ಹೋಗಿರಲಿಲ್ಲ. ಕಳೆದ ಹನ್ನೊಂದು ದಿನಗಳಿಂದ ಈ ಬಗ್ಗೆ ಸಂಬಂಧಪಟ್ಟವರಿಗೆ ನೀಡಿದ ಮನವಿಗೆ ಯಾವುದೇ ಬೆಲೆ ಇಲ್ಲದಾಗ ಕುಡಿಯುವ ನೀರಿಗಾಗಿ ಗುಡ್ಡವೊಂದರ ಮಧ್ಯಭಾಗದಲ್ಲಿ ಶೇಖರಣೆಯಾಗುತ್ತಿದ್ದ ಗುಂಡಿಯೊಂದರಿಂದ ಬರುತ್ತಿದ್ದ ಪಾಚಿಗಳೊಂದಿಗೆ ಕೂಡಿದ ಕಲುಷಿತಗೊಂಡ ನೀರನ್ನೇ ಅವಲಂಬಿಸುವ ಸ್ಥಿತಿ ನಿರ್ಮಾಣವಾಗಿತ್ತು. ಪೈಪ್ ಮೂಲಕ ಹನಿ ಹನಿಯಾಗಿ ಬರುತ್ತಿದ್ದ ನೀರನ್ನು ರಾತ್ರಿ ಹಗಲೆನ್ನದೆ ಒಂದೆಡೆ ಕಾದು ಕಾಲನಿಯ ಎಲ್ಲಾ ಮನೆಗಳವರು ಉಪಯೋಗಿಸುತ್ತಿದ್ದರು. ಇನ್ನೊಂದೆಡೆ ಹೈವೋಲ್ಟೇಜ್ ಸಮಸ್ಯೆಯಿಂದಾಗಿ ಕಳೆದ ನಾಲ್ಕು ದಿನಗಳಿಂದ ವಿದ್ಯುತ್ ಕೂಡಾ ಕೈಕೊಟ್ಟಿದ್ದು, ಕಾಲನಿಯಲ್ಲಿನ ನಿವಾಸಿಗಳು ಕತ್ತಲೆಯಲ್ಲೇ ದಿನ ದೂಡುವಂತಾಗಿದೆ.
ಪಕ್ಕದಲ್ಲೇ ಅಂಗನವಾಡಿಯೊಂದಿದ್ದು, ಅಲ್ಲಿನ ಮಕ್ಕಳಿಗೂ ಕುಡಿಯಲು ನೀರಿಲ್ಲದೆ ಇದೇ ಕಲುಷಿತ ನೀರನ್ನು ಕುಡಿಯಲು ಉಪಯೋಗಿಸಲಾಗುತ್ತಿತ್ತು. ಮಂಗಳವಾರದಂದು ಈ ಬಗ್ಗೆ ಆಕ್ರೋಶಗೊಂಡ ನಾಗರೀಕರು ಜಮಾಯಿಸತೊಡಗಿದ್ದು, ಪ್ರತಿಭಟನೆಗೆ ಸಿದ್ದತೆ ನಡೆಸಿದ್ದರು. ಅಲ್ಲದೆ ಸಂಜೆಯೊಳಗಡೆ ಸಮಸ್ಯೆಗೆ ಪರಿಹಾರ ದೊರಕದಿದ್ದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯನ್ನು ಬಹಿಷ್ಕರಿಸಲು ಮುಂದಾಗಿದ್ದರು. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಐತ್ತೂರು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಯವರು ಸಂಜೆಯೊಳಗಡೆ ಬೋರ್ವೆಲ್ಗೆ ಪಂಪನ್ನು ಹಾಕಿಸುತ್ತೇನೆಂದು ಭರವಸೆ ನೀಡಿದ ಬಳಿಕ ನಾಗರೀಕರು ಸುಮ್ಮನಾದರು.
ವಿದ್ಯುತ್ ಹಾಗೂ ನೀರಿನ ಸಮಸ್ಯೆಯಿಂದಾಗಿ ಕಲುಷಿತ ನೀರನ್ನೇ ಕುಡಿಯುವಂತಾಗಿದೆ. ಜನಪ್ರತಿನಿಧಿಗಳು ಪೊಳ್ಳು ಆಶ್ವಾಸನೆ ನೀಡಿ ಗೆದ್ದ ಬಳಿಕ ಈ ಕಡೆ ಮುಖ ಮಾಡುವುದಿಲ್ಲ. ಮಂಗಳವಾರ ಸಂಜೆಯೊಳಗಡೆ ಸಮಸ್ಯೆಯನ್ನು ಪರಿಹರಿಸದಿದ್ದಲ್ಲಿ ಮುಂಬರುವ ಚುನಾವಣೆಯನ್ನು ಬಹಿಷ್ಕರಿಸಲಾಗುವುದು.
– ಮಂಗಳಾದೇವಿ, ಕಾಲನಿ ನಿವಾಸಿ