ಈ ಬಾರಿ ಸುಳ್ಯದಲ್ಲಿ ಕಾಂಗ್ರೆಸ್ ಗೆಲುವು ಖಚಿತ: ಐವನ್ ಡಿಸೋಜ ► ಪ್ರಚಾರಕ್ಕಾಗಿ ಪ್ರಿಯಾಂಕಾ ಗಾಂಧಿ ಕಡಬಕ್ಕೆ…

(ನ್ಯೂಸ್ ಕಡಬ) newskadaba.com ಕಡಬ, ಎ.24. ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯವರು ಗೆದ್ದೆ ಗೆಲ್ಲುತ್ತೇವೆ ಎಂದು ಬೀಗುತ್ತಿದ್ದಾರೆ. ಆದರೆ ಯಾವುದೇ ಕಾರಣಕ್ಕೂ ಈ ಬಾರಿ ಕಾಂಗ್ರೆಸ್ ಬಿಜೆಪಿಗೆ ಈ ಕ್ಷೇತ್ರವನ್ನು ಬಿಟ್ಟು ಕೊಡುವುದಿಲ್ಲ. ನೂರಕ್ಕೆ ನೂರು ಗೆಲುವು ನಮ್ಮದೇ ಎಂದು ಕರ್ನಾಟಕ ರಾಜ್ಯ ಸರಕಾರದ ಮುಖ್ಯ ಸಚೇತಕ, ವಿಧಾನಪರಿಷತ್ ಸದಸ್ಯ ಐವನ್ ಡಿಸೋಜ ಆತ್ಮವಿಶ್ವಾಸ ವ್ಯಕ್ತಪಡಿಸಿದರು.

ಅವರು ಮಂಗಳವಾರದಂದು ಸುಳ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ. ರಘು ಅವರ ಪರ ಪ್ರಚಾರ ಕಾರ್ಯ ನಡೆಸಿ ಕಡಬದ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು. ಕ್ಷೇತ್ರದಲ್ಲಿ ನಾಲ್ಕು ಬಾರಿ ಗೆದ್ದ ಶಾಸಕರು ಈ ಕ್ಷೇತ್ರಕ್ಕೆ ಏನು ಮಾಡಿಲ್ಲ. ಅದೇ ಕಾರಣಕ್ಕಾಗಿ ಚುನಾವಣೆಯಿಂದ ಚುನಾವಣೆಗೆ ಅವರ ಗೆಲುವಿನ ಅಂತರ ಕಡಿಮೆಯಾಗುತ್ತಾ ಬಂದಿದೆ. ಕಳೆದ ಬಾರಿ ಅದು 1300ರ ಅಂತರಕ್ಕೆ ಬಂದು ನಿಂತಿದೆ. ಇದು ಬಿಜೆಪಿಯ ಜನಪ್ರಿಯತೆ ಕಡಿಮೆಯಾಗಿರುವುದಕ್ಕೆ ಸಾಕ್ಷಿಯಾಗಿದೆ. ನಮ್ಮ ಅಭ್ಯರ್ಥಿ ಡಾ.ರಘು ಅವರು ಕ್ಷೇತ್ರದಲ್ಲಿ ನಿರಂತರ ಜನರ ಸಂಪರ್ಕವನ್ನು ಇಟ್ಟುಕೊಂಡಿದ್ದು ಜನರ ಸಮಸ್ಯೆಗಳಿಗೆ ಸದಾ ಸ್ಪಂದಿಸುತ್ತಿದ್ದು ನಮ್ಮ ಶಾಸಕರು ಇಲ್ಲದಿದ್ದರೂ ಬಹಳಷ್ಟು ಅಭಿವೃದ್ದಿ ಕಾರ್ಯಗಳನ್ನು ಮಾಡಿದ್ದಾರೆ. ಕಡಬ ತಾಲೂಕು ಘೋಷಣೆಯಿಂದ ಹಿಡಿದು ಕೊಯಿಲ ಪಶುವೈದ್ಯಕೀಯ ಕಾಲೇಜು ಸೇರಿದಂತೆ ಮಹತ್ತರವಾದ ರಸ್ತೆ ಅಭಿವೃದ್ದಿ ಕಾರ್ಯಗಳನ್ನು ಮಾಡುವುದರೊಂದಿಗೆ ಈ ಭಾಗದ ಎಲ್ಲಾ ಬೇಡಿಕೆಗಳನ್ನು ಈಡೇರಿಸಿದ್ದೇವೆ. ಈ ಎಲ್ಲಾ ವಿಷಯಗಳಿಂದಾಗಿ ಕಾಂಗ್ರೆಸ್ ಅಭ್ಯರ್ಥಿ ಖಂಡಿತಾ ಗೆಲುವು ಸಾಧಿಸಲಿದ್ದಾರೆ ರಾಜ್ಯದಲ್ಲಿ ಸಿದ್ದರಾಮಯ್ಯ ಸರಕಾರ ನೀಡಿದ ಜನಪರ ಆಡಳಿತ ಹಾಗೂ ಅಭಿವೃದ್ದಿ ಕಾರ್ಯಗಳು ಈ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಶ್ರೀರಕ್ಷೆಯಾಗಲಿದೆ ಎಂದು ಹೇಳಿದರು.

Also Read  ಕಡಬ: ಶಾಲಾ ವಿದ್ಯಾರ್ಥಿ ನಾಪತ್ತೆ

ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿಯ ಗೆಲುವಿಗಾಗಿ ಕಾರ್ಯಕರ್ತರು ಅವಿರತ ಶ್ರಮ ವಹಿಸುತ್ತಿದ್ದಾರೆ. ಈ ಮಧ್ಯೆ ಸಾಕಷ್ಟು ಪ್ರಚಾರ ಕಾರ್ಯಗಳನ್ನು ಮಾಡುವ ದೃಷ್ಟಿಯಿಂದ ಸ್ಟಾರ್ ಪ್ರಚಾರಕರನ್ನು ಕರೆತರಲಾಗುವುದು. ಕೇರಳದ ಮಾಜಿ ಮುಖ್ಯಮಂತ್ರಿ ಉಮನ್ ಚಾಂಡಿ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಲಿದ್ದಾರೆ. ಮಾತ್ರವಲ್ಲ ನೆಹರು ಕುಟುಂಬದ ಕುಡಿ ಪ್ರಿಯಾಂಕ ಗಾಂಧಿಯವರನ್ನು ಕೂಡ ಪ್ರಚಾರಕ್ಕಾಗಿ ಕಡಬ ಭಾಗಕ್ಕೆ ಕರೆತರಲು ನಿರ್ಧಾರ ಮಾಡಲಾಗಿದೆ. ಈ ಬಗ್ಗೆ ಪ್ರಯತ್ನ ಸಾಗುತ್ತಿದೆ ಎಂದು ಐವನ್ ಡಿಸೋಜ ಹೇಳಿದರು.

 

ಪತ್ರಿಕಾಗೋಷ್ಟಿಯಲ್ಲಿ ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದಿವಾಕರ ಗೌಡ ಶಿರಾಡಿ, ರಾಜ್ಯ ಮಲಯಾಳ ಕ್ರಿಶ್ಚನ್ ಅಸೋಶಿಯೇಶನ್ ಅಧ್ಯಕ್ಷ ಎ.ಸಿ ಜಯರಾಜ್, ಕಾಂಗ್ರೆಸ್ನ ಸಾಮಾಜಿಕ ಜಾಲತಾಣದ ಜಿಲ್ಲಾ ಸಂಚಾಲಕ ನಿತ್ಯಾನಂದ ಶೆಟ್ಟಿ, ಜಿ.ಪಂ.ಸದಸ್ಯರಾದ ಪಿ.ಪಿ ವರ್ಗೀಸ್, ಸರ್ವೋತ್ತಮ ಗೌಡ, ಕಾಂಗ್ರೆಸ್ನ ಜಿಲ್ಲಾ ಉಪಾಧ್ಯಕ್ಷ ವಿಜಯ ಕುಮಾರ್ ರೈ, ಕಡಬ ಬ್ಲಾಕ್ ಕಾಂಗ್ರೆಸ್ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ರಾಯ್ ಅಬ್ರಹಾಂ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್.ಕೆ ಇಲ್ಯಾಸ್, ಕಾರ್ಯದರ್ಶಿ ಸಿ.ಜೆ ಸೈಮನ್, ಜಿಲ್ಲಾ ಕೆಡಿಪಿ ಸದಸ್ಯ ಸತೀಶ್ ಕುಮಾರ್ ಕೆಡೆಂಜಿ, ಕಡಬ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಕೆ.ಜೆ ತೋಮಸ್,  ಪ್ರಧಾನ ಕಾರ್ಯದರ್ಶಿ ಡೇನ್ನಿಸ್ ಫೆರ್ನಾಂಡೀಸ್, ತಾ.ಪಂ.ಸದಸ್ಯರಾದ ಫಝಲ್ ಕೋಡಿಂಬಾಳ, ಆಶಾಲಕ್ಷ್ಮಣ್ ಗುಂಡ್ಯ, ಕೆ.ಟಿ ವಲ್ಸಮ್ಮ, ಗಣೇಶ್ ಕೈಕುರೆ, ಕಡಬ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಉಷಾ ಅಂಚನ್ ಮೊದಲಾದವರು ಉಪಸ್ಥಿತರಿದ್ದರು.

Also Read  ಮಂಗಳೂರು: ಮಚ್ಚಿನೇಟಿಗೆ ಮತ್ತೊಂದು ಬಲಿ ► ನಿದ್ರಿಸುತ್ತಿದ್ದ ವ್ಯಕ್ತಿಯನ್ನು ಕೊಚ್ಚಿ ಕೊಲೆಗೈದ ದುಷ್ಕರ್ಮಿಗಳು

error: Content is protected !!
Scroll to Top