(ನ್ಯೂಸ್ ಕಡಬ) newskadaba.com, ಸೆ. 30 ಬೆಂಗಳೂರು: ಎಲ್ಲ ಮನೆಯಲ್ಲೂ ಈಗ ಅಡುಗೆ ಅನಿಲ ಬಳಕೆಯಾಗುತ್ತಿದೆ. ಇದನ್ನೇ ಲಾಭ ಮಾಡಿಕೊಳ್ಳುವ ಗ್ಯಾಸ್ ಏಜೆನ್ಸಿಗಳು ಗ್ರಾಹಕರಿಂದ ಸಿಲಿಂಡರ್ ಮನೆ ಮನೆ ಪೂರೈಕೆ ನೆಪದಲ್ಲಿ ಹೆಚ್ಚುವರಿ ಹಣ ಸಂಗ್ರಹ ಮಾಡುತ್ತಿದೆ. ಮನೆ ಮನೆಗೆ ಅಡುಗೆ ಅನಿಲ ಪೂರೈಕೆ ಮಾಡಲು ಯಾವುದೇ ರೀತಿಯ ಶುಲ್ಕ ಇರುವುದಿಲ್ಲ. ಅನಿಲ ಪೂರೈಕೆದಾರರು ಇದನ್ನು ಕೇಳಿದರೆ ದೂರು ನೀಡಬಹುದು.. ಬಿಲ್ನಲ್ಲಿ ನಮೂದಿಸಿರುವ ಮೊತ್ತವನ್ನುನೀಡಿದರೆ ಮಾತ್ರ ಸಾಕು ಎಂದು ಗೃಹೋಪಯೋಗಿ ಗ್ಯಾಸ್ ಸಿಲಿಂಡರ್ ನಾಗರಿಕ ತಿದ್ದುಪಡಿಯಲ್ಲಿ ಹೇಳಲಾಗಿದೆ.
ಗೃಹ ಬಳಕೆಯ ಅಡುಗೆ ಸಿಲಿಂಡರ್ ಗಳನ್ನು ಗ್ಯಾಸ್ ಏಜೆನ್ಸಿಗಳು ನೇರವಾಗಿ ಗೋದಾಮಿನಿಂದ ಪೂರೈಕೆ ಮಾಡಬಹುದು. ಇದಕ್ಕಾಗಿ ಯಾವುದೇ ರೀತಿಯ ಅಂಗಡಿಗಳನ್ನು ಇಟ್ಟುಕೊಳ್ಳುವ ಅಗತ್ಯವಿಲ್ಲ. ಅಡುಗೆ ಸಿಲಿಂಡರ್ ಅನ್ನು ರಸ್ತೆ ಬದಿ, ಸಾರ್ವಜನಿಕ ಸ್ಥಳಗಳಲ್ಲಿ ಇಟ್ಟು ಮಾರಾಟ ಮಾಡುವಂತಿಲ್ಲ ಎಂದು ಸರ್ಕಾರದ ಆದೇಶದಲ್ಲಿ ತಿಳಿಸಲಾಗಿದೆ.
ಗೃಹೋಪಯೋಗಿ ಗ್ಯಾಸ್ ಸಿಲಿಂಡರ್ ನಾಗರಿಕ ತಿದ್ದುಪಡಿಯಲ್ಲಿ ಈ ಕುರಿತು ಮಾಹಿತಿ ನೀಡಿರುವ ಸರ್ಕಾರ, ಅನಿಲ ಪೂರೈಕೆ ಶುಲ್ಕ ಸಂಬಂಧಿತವಾಗಿ 2006ರಲ್ಲೇ ತಿದ್ದುಪಡಿ ಮಾಡಲಾಗಿದೆ. ಪ್ರತಿ 1.5 ಕಿ.ಮೀ. ವರೆಗೆ ಅಡುಗೆ ಅನಿಲವನ್ನು ಯಾವುದೇ ಶುಲ್ಕವಿಲ್ಲದೆ ಪೂರೈಕೆ ಮಾಡಬೇಕು ಎಂದು ಹೇಳಿದೆ. 2.5 ಕಿ.ಮೀ. ಗಿಂತ ಹೆಚ್ಚಿನ ದೂರಕ್ಕೆ ಪ್ರತಿ ಕಿ.ಮೀ.ಗೆ ಪ್ರತಿ ಸಿಲಿಂಡರ್ ಗೆ ಪೂರೈಕೆ ಶುಲ್ಕವಾಗಿ 1.60 ರೂ. ಮಾತ್ರ ವಿಧಿಸತಕ್ಕದ್ದು. ಒಂದು ವೇಳೆ ಇದಕ್ಕಿಂತ ಹೆಚ್ಚು ಶುಲ್ಕವನ್ನು ಡೆಲಿವರಿ ಹುಡುಗರು ಕೇಳಿದರೆ ದೂರು ನೀಡಬಹುದು.








