ಹೊಸ್ಮಠ ಸೇತುವೆ ಬಳಿ ವಾಹನ ತೊಳೆದು ನೀರು ಕಲುಷಿತಗೊಳಿಸದಂತೆ ಕ್ರಮ ► ಹೊಳೆಗೆ ಇಳಿಯುವ ಮಾರ್ಗ ಬಂದ್ ಮಾಡಿ ಎಚ್ಚರಿಕೆ ಫಲಕ ಹಾಕಿದ ಪಂಚಾಯತ್

(ನ್ಯೂಸ್ ಕಡಬ) newskadaba.com ಕಡಬ, ಎ.21. ಇಲ್ಲಿನ ಹೊಸ್ಮಠ ಸೇತುವೆಯ ಬಳಿ ಗುಂಡ್ಯ ಹೊಳೆಗೆ ವಾಹನಗಳನ್ನು ಇಳಿಸಿ ತೊಳೆಯುತ್ತಿರುವುದರಿಂದಾಗಿ ನೀರು ಕಲುಷಿತಗೊಂಡು ಹೊಳೆಯ ನೀರನ್ನು ಉಪಯೋಗಿಸುತ್ತಿರುವವರಿಗೆ ತೊಂದರೆಯಾಗುತ್ತಿದೆ ಎನ್ನುವ ಸಚಿತ್ರ ವರದಿ ಮಾಧ್ಯಮಗಳಲ್ಲಿ ಪ್ರಕಟಗೊಂಡ ಬೆನ್ನಲ್ಲೇ ಕುಟ್ರುಪ್ಪಾಡಿ ಗ್ರಾಮ ಪಂಚಾಯತ್ ವತಿಯಿಂದ ಹೊಳೆಗೆ ಇಳಿಯುವ ಮಾರ್ಗ ಬಂದ್ ಮಾಡಿ ನೀರು ಮಲಿನಗೊಳಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ಫಲಕ ನೆಡಲಾಗಿದೆ.

ಹೊಳೆಯ ಬದಿಯ ನಿವಾಸಿಗಳು ತಮ್ಮ ಬಾವಿಗಳಲ್ಲಿ ನೀರಿನ ಕೊರತೆ ಎದುರಾಗಿರುವುದರಿಂದ ಕುಡಿಯುವುದಕ್ಕಾಗಿಯೂ ಹೊಳೆಯ ನೀರನ್ನು ಉಪಯೋಗಿಸುತ್ತಿದ್ದಾರೆ. ಅಡುಗೆಗೆ, ಜಾನುವಾರುಗಳಿಗೆ ಹಾಗೂ ಬಟ್ಟೆ ಒಗೆಯುವುದು ಇತ್ಯಾದಿಗಳಿಗೂ ಹೊಳೆಯ ನೀರನ್ನೇ ಆಶ್ರಯಿಸುವಂತಾಗಿದೆ. ಆದರೆ ಇಂತಹ ಸಂದರ್ಭದಲ್ಲಿ ಹೊಳೆಗೆ ವಾಹನಗಳನ್ನು ಇಳಿಸಿ ತೊಳೆಯುವುದರಿಂದಾಗಿ ನೀರು ಕಲುಷಿತಗೊಳ್ಳುತ್ತಿದೆ. ವಾಹನ ತೊಳೆಯುವ ವೇಳೆ ನೀರಿನಲ್ಲಿ ಸೇರಿಕೊಳ್ಳುವ ತೈಲದ ಅಂಶವು ಆರೋಗ್ಯಕ್ಕೆ ಹಾನಿಕರವಾಗಿದೆ. ಆದುದರಿಂದ ಸ್ಥಳೀಯ ಕುಟ್ರುಪ್ಪಾಡಿ ಗ್ರಾಮ ಪಂಚಾಯತ್ ವತಿಯಿಂದ ಈ ಕುರಿತು ಸೂಕ್ತ ಕ್ರಮ ಕೈಗೊಂಡು ಹೊಳೆಯ ನೀರನ್ನು ಮಲಿನಗೊಳಿಸದಂತೆ ತಡೆಗಟ್ಟಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದರು. ಈ ಹಿನ್ನೆಲೆಯಲ್ಲಿ ಶನಿವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹೊಳೆಗೆ ವಾಹನ ಇಳಿಸಲು ಉಪಯೋಗಿಸಲಾಗುತ್ತಿದ್ದ ಮಾರ್ಗವನ್ನು ಬಂದ್ ಮಾಡಿ ಎಚ್ಚರಿಕೆ ಫಲಕ ಅಳವಡಿಸಿದ್ದಾರೆ.

ಎಲ್ಲೆಡೆ ನೀರಿನ ಕೊರತೆ ಎದುರಾಗಿರುವುದರಿಂದ ಸಾಕಷ್ಟು ಜನ ಹೊಳೆಯ ನೀರನ್ನೇ ಕುಡಿಯುವುದಕ್ಕಾಗಿ ಮತ್ತು ಅಡುಗೆಗೆ ಬಳಸುತ್ತಿದ್ದಾರೆ. ಆದರೆ ನೀರಿನ ಹರಿವು ಕಡಿಮೆ ಇರುವ ಹೊಳೆಯಲ್ಲಿ ವಾಹನ ತೊಳೆಯುವುದರಿಂದ ನೀರು ಮಲಿನಗೊಳ್ಳುತ್ತಿದೆ. ವಾಹನಗಳ ತೈಲಮಿಶ್ರಿತ ಕಲುಷಿತ ನೀರನ್ನು ಉಪಯೋಗಿಸುವ ಜನರು ಹಾಗೂ ಜಾನುವಾರುಗಳ ಆರೋಗ್ಯ ಕೆಡುವ ಭೀತಿಯೂ ಇರುವುದರಿಂದ ಹೊಳೆಯ ನೀರನ್ನು ಮಲಿನಗೊಳಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು.

– ವಿಲ್ರೆಡ್ ಲಾರೆನ್ಸ್‌ ರೋಡ್ರಿಗಸ್, ಕುಟ್ರುಪ್ಪಾಡಿ ಗ್ರಾ.ಪಂ. ಪಿಡಿಒ

error: Content is protected !!

Join the Group

Join WhatsApp Group