ಬಹಳ ವಿಜೃಂಭಣೆಯಿಂದ ನಡೆದ ಕಡಬದ ಆಯನ ► ಕಡಂಬಳಿತ್ತಾಯ ದೈವದ ನೇಮೋತ್ಸವ, ಶ್ರೀಪುರುಷ ದೈವದ ಪೇಟೆ ಸವಾರಿ

(ನ್ಯೂಸ್ ಕಡಬ) newskadaba.com ಕಡಬ, ಎ.22. ಕಡಬದ ಆಯನದಲ್ಲಿ ರಾಜ ದೈವಗಳೆಂದೇ ಪ್ರಸಿದ್ದಿ ಪಡೆದ ಶ್ರೀ ಕಡಂಬಳಿತ್ತಾಯ ಸ್ವಾಮಿ ಮತ್ತು ಶ್ರೀ ಪುರುಷ ದೈವದ ಹಾಗೂ ಇತರ ದೈವಗಳ ನೇಮೋತ್ಸವವು ಶನಿವಾರದಂದು ಬಹಳ ವಿಜೃಂಭಣೆಯಿಂದ ಜರುಗಿತು.

ಬೆಳಿಗ್ಗೆ ಶ್ರೀಕಡಂಬಳಿತ್ತಾಯ ದೈವದ ಭಂಡಾರ ತೆಗೆದು ಮಾಡದಿಂದ ಪ್ರಧಾನ ಆಡಳಿತದಾರ ರಾಜೇಂದ್ರ ಹೆಗ್ಡೆಯವರ ನೇತೃತ್ವದಲ್ಲಿ ಸಾವಿರಾರು ಭಕ್ತಾದಿಗಳೊಂದಿಗೆ ಮುಡಿಯಾಗುವ ಮಜಲಿಗೆ ಹೋಗಿ ಅಲ್ಲಿ ಶ್ರೀಕಡಂಬಳಿತ್ತಾಯ ಸ್ವಾಮಿ ಮುಡಿಯಾಗುವುದರೊಂದಿಗೆ ಕಡಬ ಪೇಟೆಯಲ್ಲಿ ದೈವದ ಕಟ್ಟೆಯಲ್ಲಿ ಕಟ್ಟೆ ಪೂಜೆ ನಡೆದು ಬಳಿಕ ರಾಜ ಬೀದಿಯಲ್ಲಿ ಮೆರವಣಿಗೆಯಲ್ಲಿ ಸಾಗಿ ಮಾಡದಲ್ಲಿ ನೇಮೋತ್ಸವ ನಡೆಯಿತು. ನೇಮೋತ್ಸವದಲ್ಲಿ ವಿವಿಧ ದೈವಸ್ಥಾನ, ದೇವಸ್ಥಾನ, ಭಜನಾ ಮಂದಿರಗಳ ಅರ್ಚಕರು, ಆಡಳಿತ ಮಂಡಳಿ ಅಧ್ಯಕ್ಷರು, ಪದಾಧಿಕಾರಿಗಳು, ವ್ಯವಸ್ಥಾಪನಾ ಸಮಿತಿ, ಆಡಳಿತ ವರ್ಗದವರು ಭಾಗವಹಿಸಿ ಪ್ರಾರ್ಥನೆ ಸಲ್ಲಿಸುವುದರೊಂದಿಗೆ ದೈವದ ಪ್ರಸಾದ ಸ್ವೀಕರಿಸಿದರು. ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಅಪರಾಹ್ನ ಉದ್ರಾಂಡಿ ದೈವ, ಗ್ರಾಮ ಪಂಜುರ್ಲಿ ದೈವ, ಪೊಟ್ಟ ದೈವಗಳ ನೇಮೋತ್ಸವ ನಡೆಯಿತಲ್ಲದೆ ರಾಜ ದೈವ ಶ್ರೀ ಪುರುಷ ದೈವದ ನೇಮೋತ್ಸವ ನಡೆದು ಸಂಜೆ ಪೇಟೆ ಸವಾರಿ ನಡೆಯಿತು. ರಾತ್ರಿ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಮಧ್ಯರಾತ್ರಿ ಕೊಡಿ ಇಳಿಸಿ ಯಥಾಪ್ರಕಾರ ದೈವಗಳ ಭಂಡಾರ ಭಂಡಾರಗಳ ಮನೆಗಳಿಗೆ ತೆರಳಿತು.

Also Read  ಬಂಟ್ವಾಳ: ಮರ ಕಡಿಯುತ್ತಿದ್ದ ವ್ಯಕ್ತಿಯ ಮೇಲೆಯೇ ಉರುಳಿಬಿದ್ದ ಮರ ➤ ವ್ಯಕ್ತಿ ಮೃತ್ಯು..!

ಜಾತ್ರೋತ್ಸವದಲ್ಲಿ ವಿಶೇಷ ಆಕರ್ಷಣೆಯ ಸಿಡಿಮದ್ದು ಪ್ರದರ್ಶನವು ಭಕ್ತಾದಿಗಳ ಮನಸೂರೆಗೊಂಡಿತು. ಜನಾರ್ಧನ ಕೊಣಾಜೆ ಮತ್ತು ರಮೇಶ್ ಕೊಣಾಜೆಯವರ ನೇತೃತ್ವದಲ್ಲಿ ದೈವಗಳ ನರ್ತನ ನಡೆಯಿತು. ದೀಕ್ಷಿತ್ ಜೈನ್ ಚೆನ್ನಾವರ ದೈವದ ಮಧ್ಯಸ್ಥಿಕೆಯನ್ನು ವಹಿಸಿದ್ದರು. ಜಾತ್ರೋತ್ಸವದಲ್ಲಿ ಶ್ರೀಕಡಂಬಳಿತ್ತಾಯ ಸ್ವಾಮಿ ಮತ್ತು ಶ್ರೀ ಪುರುಷ ದೈವ ಮತ್ತು ಇತರ ದೈವಗಳ ಪ್ರಧಾನ ಆಡಳಿತದಾರ ರಾಜೇಂದ್ರ ಹೆಗ್ಡೆ ಕಡಬಗುತ್ತು, ಶ್ರೀ ಕಡಂಬಳಿತ್ತಾಯ ಸ್ವಾಮಿಯ ಆಡಳಿತಾಧಿಕಾರಿ ತಮ್ಮಯ್ಯ ನಾಯ್ಕ್ ಕುಕ್ಕೆರೆಬೆಟ್ಟು, ಕಲ್ಲುರ್ಟಿ ಕಲ್ಕುಡ ದೈವಗಳ ಆಡಳಿತಾಧಿಕಾರಿ ಮೋನಪ್ಪ ಕುಂಬಾರ ಪಾಲೋಳಿ, ಜಾತ್ರೋತ್ಸವ ಸಮಿತಿ ಅಧ್ಯಕ್ಷ ಧರಣೇಂದ್ರ ಜೈನ್ ಬೆದ್ರಾಜೆ, ಉಪಾಧ್ಯಕ್ಷ ಬಾಲಕೃಷ್ಣ ಗೌಡ ಆರಿಗ, ದೈವಜ್ಞರಾದ ಕೆ.ಪ್ರಸಾದ ಕೆದಿಲಾಯ, ಕಡಬ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜನಾರ್ಧನ ಗೌಡ ಪಣೆಮಜಲು, ಶ್ರೀಕಂಠ ಸ್ವಾಮಿ ಮತ್ತು ಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಾರಾಯಣ ಗೌಡ ಅಲುಂಗೂರು ಮೊದಲಾದವರು ದೈವದ ಸೇವೆಯಲ್ಲಿ ಸಹಕರಿಸಿದರು.

ಜಾತ್ರೋತ್ಸವ ಸಮಿತಿಯ ಕೋಶಾಧಿಕಾರಿ ರಮೇಶ್ ರಾವ್ ಹೊಸಮನೆ ಹಾಗೂ ಜೊತೆ ಕಾರ್ಯದರ್ಶಿ ಮನೋಜ್ ಕುಮಾರ್ ಆರಿಗ ಜಾತ್ರೋತ್ಸವದಲ್ಲಿ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯದರ್ಶಿ ಲಕ್ಷ್ಮೀಶ ಗೌಡ ಆರಿಗ ಸ್ವಾಗತಿಸಿ, ಭಕ್ತಾದಿಗಳನ್ನು ಬರಮಾಡಿಕೊಂಡರು. ವರ್ಷಂಪ್ರತಿ ನಡೆಯುವ ಕಡಬದ ಆಯನದಲ್ಲಿ ಕಡಬ ಸೇರಿದಂತೆ ಬೇರೆ ಬೇರೆ ಹೊರ ಊರುಗಳ ಅನೇಕ ಭಕ್ತಾದಿಗಳು ಭಾಗವಹಿಸಿ ಪ್ರಸಾದ ಸ್ವೀಕರಿಸಿದರು. ಜಾತ್ರೆಯಲ್ಲಿ ಬ್ಯಾಂಡ್ ವಾದ್ಯಗಳ ಗೋಷ್ಟಿ ವಿಶೇಷವಾಗಿದ್ದರೆ ವಿಜೃಂಭಣೆಯ ವಿದ್ಯುತ್ ದೀಪಾಲಂಕೃತಗೊಂಡ ಜಾತ್ರೋತ್ಸವವು ಭಕ್ತಾದಿಗಳನ್ನು ಆಕರ್ಷಿಸುವಂತಿತ್ತು. ಜಾತ್ರೋತ್ಸವದಲ್ಲಿ ಬಿಸಿಲಿನ ತಾಪವನ್ನು ತಣಿಸಲು ಮಜ್ಜಿಗೆ ವ್ಯವಸ್ಥೆಯನ್ನು ಮಾಡಲಾಗಿತ್ತು.

Also Read  ತೋಟಕ್ಕೆ ನುಗ್ಗಿದ ಕಾಡಾನೆ- ಸುಳ್ಯದಲ್ಲಿ ಕೃಷಿ ಹಾನಿ

ವರ್ಷಂಪ್ರತಿ ನಡೆಯುವ ಜಾತ್ರೆಯಲ್ಲಿ ಕಂದಾಯ ಇಲಾಖೆ, ಪೊಲೀಸ್ ಇಲಾಖೆ, ಸ್ಥಳೀಯ ಆಡಳಿತ ವರ್ಗದವರನ್ನು ಜಾತ್ರೋತ್ಸವ ಸಮಿತಿ ವತಿಯಿಂದ ಬ್ಯಾಂಡ್ ವಾದ್ಯಗಳ ಮೂಲಕ ಮಾಡಕ್ಕೆ ಕರೆತರುವುದು ವಾಡಿಕೆಯಾಗಿದ್ದು ಈ ವರ್ಷವೂ ಕಡಬ ಪೊಲೀಸ್ ಠಾಣೆಯ ಸಬ್‌ಇನ್ಸ್‌ಪೆಕ್ಟರ್ ಪ್ರಕಾಶ್ ದೇವಾಡಿಗ, ಪ್ರಭಾರ ಉಪ ತಹಶೀಲ್ದಾರ್ ಭಾರತಿ, ಕಡಬ ಕಂದಾಯ ನಿರೀಕ್ಷಕ ಕೊರಗಪ್ಪ ಹೆಗ್ಡೆ, ಕಡಬ ಗ್ರಾ.ಪಂ.ಅಧ್ಯಕ್ಷ ಬಾಬು ಮುಗೇರ, ಕಡಬ ಗ್ರಾ.ಪಂ. ಅಭಿವೃದಿ ಅಧಿಕಾರಿ ಚೆನ್ನಪ್ಪ ಗೌಡ ಕಜೆಮೂಲೆ ಸೇರಿದಂತೆ ಇಲಾಖಾ ಅಧಿಕಾರಿಗಳನ್ನು ಕರೆತಂದು ಮಾಡದಲ್ಲಿ ಪ್ರಸಾದ ವಿತರಿಸಲಾಯಿತು.

 

error: Content is protected !!
Scroll to Top