(ನ್ಯೂಸ್ ಕಡಬ) newskadaba.com ಕಡಬ, ಎ.21. ಜಮ್ಮು ಕಾಶ್ಮೀರದಲ್ಲಿ 8 ವರ್ಷದ ಅಪ್ರಾಪ್ತ ಬಾಲಕಿಯ ಅತ್ಯಾಚಾರಗೈದು ಕೊಲೆ ಮಾಡಿರುವ ಕ್ರೂರಿಗಳನ್ನು ಕೂಡಲೆ ಗಲ್ಲಿಗೇರಿಸುವ ಮುಖಾಂತರ ಮಹಿಳೆಯರು ಹಾಗು ಹೆಣ್ಣುಮಕ್ಕಳನ್ನು ನೆಮ್ಮದಿಯಿಂದ ಬದುಕಲು ಬಿಡಬೇಕೆಂದು ಕರ್ನಾಟಕ ರಾಜ್ಯ ಮುಸ್ಲಿಂ ಕೌನ್ಸಿಲ್ನ ಪ್ರಧಾನ ಕಾರ್ಯದರ್ಶಿ ಹಾಜಿ ಸೈಯದ್ ಮೀರಾ ಸಾಹೇಬ್ ಒತ್ತಾಯಿಸಿದ್ದಾರೆ.
ಅವರು ಅಪ್ರಾಪ್ತೆ ಆಸೀಫಾಳ ಅತ್ಯಾಚಾರ ಮಾಡಿ ಕೊಲೆಗೈದ ಕ್ರೂರ ಕೃತ್ಯವನ್ನು ಖಂಡಿಸಿ ಕಡಬ ಕೇಂದ್ರ ಜುಮ್ಮಾ ಮಸೀದಿಯ ವಠಾರದಲ್ಲಿ ಎ.20ರಂದು ಹಮ್ಮಿಕೊಂಡಿದ್ದ ಶಾಂತ ಪ್ರತಿಭಟನೆಯಲ್ಲಿ ಮಾತನಾಡಿ ದೇಶಕ್ಕೆ ಸ್ವಾತಂತ್ರ್ಯ ಬಂದು 70 ವರ್ಷ ಕಳೆದಿದ್ದು ಕಳೆದ ಕೆಲವು ವರ್ಷಗಳಿಂದ ಈ ದೇಶದಲ್ಲಿ ಹೆಣ್ಣು ಮಕ್ಕಳಿಗೆ ನೆಮ್ಮಿದಿಯ ಜೀವನ ಇಲ್ಲದಂತಾಗಿದೆ. ಮುಗ್ದ ಮಕ್ಕಳು ಕೂಡ ಮನೆಯಿಂದ ಹೊರಹೋಗಿ ಬರುವಂತಿಲ್ಲ. ಪ್ರಜಾಪ್ರಭುತ್ವ ದೇಶದಲ್ಲಿ ಭಯದ ವಾತಾವರಣದಲ್ಲಿ ಬದುಕಬೇಕಾದ ಪರಿಸ್ಥಿತಿ ಬಂದರೆ ನಮನ್ನು ರಕ್ಷಿಸುವವರು ಯಾರು ಎಂದು ಪ್ರಶ್ನಿಸಿದ ಅವರು ಮುಂದೆಂದೂ ಇಂತಹ ಅನೈತಿಕ, ಅತ್ಯಾಚಾರ, ಕೊಲೆ ನಡೆಯದಂತೆ ಸರಕಾರ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳುವುದಲ್ಲದೆ ಅತ್ಯಾಚಾರಿ ಕ್ರೂರಿಗಳನ್ನು ಗಲ್ಲಿಗೇರಿಸಬೇಕೆಂದು ಆಗ್ರಹಿಸಿದರು.
ಕಡಬ ಕೇಂದ್ರ ಜುಮ್ಮಾ ಮಸೀದಿಯ ಖತೀಬರಾದ ಅಬ್ದುಲ್ ಮಜೀದ್ ಮಲ್ಲಿ ಸಖಾಫಿ ಮುಗ್ದ ಆಸೀಫಾಳಿಗೆ ಜನ್ನತ್ ಪ್ರಾಪ್ತವಾಗುವುದರೊಂದಿಗೆ ಅವಳ ಕುಟುಂಬಕ್ಕೆ ಸಂಕಷ್ಟವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಅಲ್ಲಾಹು ಕರುಣಿಸಲಿ, ಇದೇ ರೀತಿ ದಯಾ ದಾಕ್ಷಿಣ್ಯವಿಲ್ಲದೆ ಇಂತಹ ಕೃತ್ಯವನ್ನು ಎಸಗುವ ಯಾರೇ ಆಗಿರಲಿ ಯಾವುದೇ ಜಾತಿ ಜನಾಂಗದವರಾಗಿರಲಿ ಅವರಿಗೆ ಅಲ್ಲಾಹು ಸದ್ಬುದ್ದಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸಿದರು.
ಕೇಂದ್ರ ಜುಮ್ಮಾ ಮಸೀದಿಯ ಅಧ್ಯಕ್ಷ ಮಹಮ್ಮದ್ ಶೆರೀಫ್, ಮಾಜಿ ಅಧ್ಯಕ್ಷ ಹಾಜಿ ಚೋಟಾ ಇಸ್ಮಾಯಿಲ್ ಸಾಹೇಬ್, ಮಾಜಿ ಉಪಾಧ್ಯಕ್ಷ ಹಾಜಿ ಶಾಬು ಸಾಹೇಬ್, ಸ್ವಲಾತ್ ಕಮಿಟಿಯ ಮಾಜಿ ಅಧ್ಯಕ್ಷರಾದ ಕೆ.ಎಸ್ ಅಬ್ದುಲ್ ಖಾದರ್, ಜಮಾಅತ್ ಕಮಿಟಿಯ ಜೊತೆ ಕಾರ್ಯದರ್ಶಿ ಇಬ್ರಾಹಿಂ ಕೋಡಿಬೈಲ್, ಸದಸ್ಯರಾದ ಶೆರೀಫ್ ಮಣಿಮುಂಡ, ಪುತ್ತುಮೋನು ಬಾಜಿನಡಿ, ಅಬ್ದುಲ್ ಆಜಿ ಮೂರಾಜೆ, ಶುಕುರ್ ಅಡ್ಡಗದ್ದೆ, ಅಕ್ಬರ್ ಸಾಹೇಬ್ ಕೇಪು, ಹನೀಫ್ ಸಖಾಫಿ, ಇಬ್ರಾಹಿಂ ಮುಸ್ಲಿಯಾರ್, ಶುಕುರ್ ಮುಸ್ಲಿಯಾರ್, ತಾಜುದ್ದೀನ್ ಮುಸ್ಲಿಯಾರ್, ಮಾಣಿ ಎಸ್ವೈಎಸ್ ಪ್ರಧಾನ ಕಾರ್ಯದರ್ಶಿ ಸೈಯದ್ ಸಯೀದ್ ಸೇರಿದಂತೆ ಜಮಾಅತರು ನೆರೆಯ ಜಮಾಅತರು ಉಪಸ್ಥಿತರಿದ್ದರು. ಕಡಬ ಎಸ್ಎಸ್ಎಫ್ ವಲಯಾಧ್ಯಕ್ಷ ರಿಯಾಜ್ ಸಹದಿ ಸ್ವಾಗತಿಸಿ, ಕಡಬ ಕೇಂದ್ರ ಜುಮ್ಮಾ ಮಸೀದಿಯ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಫೈಝಲ್ ಎಸ್ಇಎಸ್ ವಂದಿಸಿದರು.