(ನ್ಯೂಸ್ ಕಡಬ) newskadaba.com, ಸೆ.15 ದುಬೈ: ಏಷ್ಯಾಕಪ್ ಟಿ20 ಟೂರ್ನಿಯ ಗುಂಪು ಹಂತದ ಪಂದ್ಯದಲ್ಲಿ ಬದ್ಧ ಎದುರಾಳಿ ಪಾಕಿಸ್ತಾನವನ್ನು 7 ವಿಕೆಟ್ ಅಂತರದಿಂದ ಮಣಿಸಿದ ಭಾರತ ತಂಡ ಮತ್ತೊಮ್ಮೆ ಪಾಕ್ ವಿರುದ್ಧ ಕಣಕ್ಕಿಳಿಯಲಿದೆ. ಮುಂದಿನ ಭಾನುವಾರ ನಡೆಯುವ ಸೂಪರ್-4 ಹಂತದಲ್ಲಿ ಮುಖಾಮುಖಿಯಾಗಲಿವೆ. ಈ ಪಂದ್ಯ ಕೂಡ ದುಬೈನಲ್ಲಿಯೇ ನಡೆಯಲಿದೆ. ಆದರೆ ಪಾಕ್ ತನ್ನ ಕೊನೆಯ ಪಂದ್ಯದಲ್ಲಿ ಯುಎಇ ವಿರುದ್ಧ ಸೋತರೆ ಈ ಮುಖಾಮುಖಿ ತಪ್ಪಲಿದೆ.
ಪ್ರತಿ ಗುಂಪಿನ ಅಗ್ರ 2 ತಂಡಗಳು ಸೂಪರ್-4 ಹಂತಕ್ಕೇರಲಿವೆ. ಇಲ್ಲೂ ಎಲ್ಲ ತಂಡಗಳು ತಲಾ ಒಮ್ಮೆ ಮುಖಾಮುಖಿ ಆಗಲಿದ್ದು, ಅಂತಿಮವಾಗಿ ಅಗ್ರ 2 ತಂಡಗಳ ನಡುವೆ ಸೆ. 28ರಂದು ಫೈನಲ್ ಪಂದ್ಯ ನಡೆಯಲಿದೆ. ಉಭಯ ತಂಡಗಳು ಫೈನಲ್‌ಗೇರಿದರೆ ಸತತ ಮೂರನೇ ಭಾನುವಾರ ಕೂಡ ಭಾರತ-ಪಾಕ್ ಪಂದ್ಯ ನಡೆಯಲಿದೆ. ಸ್ವಾರಸ್ಯವೆಂದರೆ, ಏಷ್ಯಾ ಕಪ್ ಚರಿತ್ರೆಯಲ್ಲಿ ಭಾರತ-ಪಾಕಿಸ್ತಾನ ತಂಡಗಳು ಇಮ್ಮೆಯೂ ಫೈನಲ್‌ನಲ್ಲಿ ಮುಖಾಮುಖಿ ಆಗಿಲ್ಲ!.
ಇಲ್ಲಿನ ದುಬೈ ಇಂಟರ್‌ನ್ಯಾಷನಲ್ ಕ್ರಕೆಟ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಪಾಕಿಸ್ತಾನ, ಬೃಹತ್ ಮೊತ್ತ ಪೇರಿಸುವ ಮೂಲಕ ಭಾರತಕ್ಕೆ ಒತ್ತಡ ಹೇರುವ ಯೋಜನೆಯಲ್ಲಿತ್ತು. ಆದರೆ ಚೈನಾಮನ್ ಕುಲ್‌ದೀಪ್ ಯಾದವ್ ಸ್ಪಿನ್ ದಾಳಿಗೆ ಪತರಗುಟ್ಟಿದ ಪಾಕ್ 9 ವಿಕೆಟ್‌ಗೆ 127 ರನ್ ಗಳಿಸಲಷ್ಟೇ ಶಕ್ತವಾಯಿತು. ಸಣ್ಣ ಮೊತ್ತವನ್ನು ಬೆನ್ನಟ್ಟಿದ ಭಾರತ 15.5 ಓವರ್‌ಗಳಲ್ಲಿ 3 ವಿಕೆಟ್‌ಗೆ 131 ರನ್ ಬಾರಿಸಿ ಗೆಲುವು ತನ್ನದಾಗಿಸಿಕೊಂಡಿತು.














