(ನ್ಯೂಸ್ ಕಡಬ) newskadaba.com, ಸೆ.13 ಮಂಗಳೂರು : ನಕಲಿ ದಾಖಲೆ ಸೃಷ್ಟಿಸಿ ಆರೋಪಿಗಳಿಗೆ ಜಾಮೀನು ಕೊಡಿಸುತ್ತಿದ್ದ ಗ್ಯಾಂಗ್ಗಳನ್ನು ನಗರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ಭೇದಿಸಿದ್ದಾರೆ.
ಖಚಿತ ಮಾಹಿತಿಯ ಆಧಾರದ ಮೇಲೆ, ಉರ್ವ ಪೊಲೀಸ್ ಠಾಣೆ ವ್ಯಾಪ್ತಿಯ ಅಬ್ದುಲ್ ರೆಹಮಾನ್ ಎಂಬಾತನನ್ನು ಸಿಸಿಬಿ ಪೊಲೀಸರು ಸೆಪ್ಟೆಂಬರ್ 9ರಂದು ವಶಕ್ಕೆ ಪಡೆದಿದ್ದಾರೆ. ಈತ ವಿವಿಧ ಪ್ರಕರಣಗಳ ಆರೋಪಿಗಳಿಗೆ ಜಾಮೀನು ಕೊಡಿಸಲು ನಕಲಿ ಆಧಾರ್ ಕಾರ್ಡ್‌ಗಳು ಮತ್ತು ಆಸ್ತಿ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸುತ್ತಿದ್ದ ಎಂದು ತಿಳಿದುಬಂದಿದೆ. ವಿಚಾರಣೆ ವೇಳೆ ಈತ ನಕಲಿ ದಾಖಲೆಗಳನ್ನು ಬಳಸಿರುವುದು ದೃಢಪಟ್ಟಿದೆ. ಈ ಸಂಬಂಧ ಉರ್ವ ಪೊಲೀಸ್ ಠಾಣೆಯಲ್ಲಿ ಕಾನೂನು ವಿಭಾಗಗಳ ಅಡಿಯಲ್ಲಿ ಪ್ರಕರಣ (ಕ್ರೈಮ್ ನಂ. 81/2025) ದಾಖಲಿಸಲಾಗಿದೆ.
ಹೆಚ್ಚಿನ ತನಿಖೆಯ ಸಂದರ್ಭದಲ್ಲಿ, ಅಬ್ದುಲ್ ರೆಹಮಾನ್ ಕೋಡಿಯಾಲ್‌ಬೈಲ್‌ನಲ್ಲಿರುವ ಕಂಪ್ಯೂಟರ್ ಸೆಂಟರ್ ನೌಕರ ನಿಶಾಂತ್ ಕುಮಾರ್ ಎಂಬಾತನಿಂದ ಸಹಕಾರ ಪಡೆದಿರುವುದಾಗಿ ತಿಳಿಸಿದ್ದಾನೆ. ನಿಶಾಂತ್ ಕುಮಾರ್‌ನನ್ನು ಕೂಡ ವಶಕ್ಕೆ ತೆಗೆದುಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ ಆತನನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.
ಆರೋಪಿಗಳು ನಕಲಿ ಆಧಾರ್ ಕಾರ್ಡ್‌ಗಳಿಗೆ ತಮ್ಮ ಫೋಟೋ ಅಂಟಿಸಿ, ನಿಜವಾದ ಶ್ಯೂರಿಟಿಗಳಂತೆ ನ್ಯಾಯಾಲಯದಲ್ಲಿ ಹಾಜರಾಗಿ, ಕನಿಷ್ಠ 2 ಪ್ರಕರಣಗಳಲ್ಲಿ ಆರೋಪಿಗಳಿಗೆ ಜಾಮೀನು ಪಡೆದುಕೊಂಡಿರುವುದು ತನಿಖೆ ಸಮಯದಲ್ಲಿ ಬೆಳಕಿಗೆ ಬಂದಿದೆ. ಈ ಸಂಬಂಧ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಎರಡು ಪ್ರಕರಣಗಳು ದಾಖಲಾಗಿವೆ.
ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ (ಐಪಿಎಸ್), ಡಿಸಿಪಿ (ಕಾನೂನು ಮತ್ತು ಸುವ್ಯವಸ್ಥೆ) ಮಿಥುನ್ ಎಚ್ ಎನ್ (ಐಪಿಎಸ್) ಮತ್ತು ಡಿಸಿಪಿ (ಅಪರಾಧ ಮತ್ತು ಸಂಚಾರ) ಕೆ ರವಿಶಂಕರ್ (ಕೆಎಸ್‌ಪಿಎಸ್) ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆಯನ್ನು ನಡೆಸಲಾಗಿದೆ.








