(ನ್ಯೂಸ್ ಕಡಬ) newskadaba.com ಚಿಕ್ಕಮಗಳೂರು, ಎ.19. ಟೂರಿಸ್ಟ್ ಕಾರು ಹಾಗೂ ಕೆಎಸ್ಸಾರ್ಟಿಸಿ ಬಸ್ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿ ನಾಲ್ವರು ಮೃತಪಟ್ಟು, ಮೂವರು ಗಂಭೀರ ಗಾಯಗೊಂಡ ಘಟನೆ ಕಡೂರು – ಚಿಕ್ಕಮಗಳೂರು ಹೆದ್ದಾರಿಯ ಹಿರೇಗೌಜ ಗ್ರಾಮದಲ್ಲಿ ಗುರುವಾರದಂದು ನಡೆದಿದೆ.
ಮೃತರನ್ನು ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಮೂಲದ ದಾಸಪ್ಪ, ದೀಪಾ, ಶ್ರೇಯಾ ಹಾಗೂ ಕಾರು ಚಾಲಕ ಲಿಂಗೇಶ್ ಎಂದು ಗುರುತಿಸಲಾಗಿದೆ. ಭದ್ರಾವತಿ ಮೂಲದ ಒಂದೇ ಕುಟುಂಬದವರು ಶಿವಮೊಗ್ಗದಿಂದ ಬಾಡಿಗೆಯ ಕಾರಿನಲ್ಲಿ ಚಿಕ್ಕಮಗಳೂರಿಗೆ ಪ್ರವಾಸಕ್ಕೆಂದು ಬಂದಿದ್ದು, ಹಿಂತಿರುಗುತ್ತಿದ್ದಾಗ ಹಿರೇಗೌಜ ಗ್ರಾಮದ ತಿರುವಿನಲ್ಲಿ ಕೆಎಸ್ಸಾರ್ಟಿಸಿ ಬಸ್‍ಗೆ ಮುಖಾಮುಖಿ ಢಿಕ್ಕಿಯಾಗಿದೆ ಎನ್ನಲಾಗಿದೆ. ಢಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಮೂವರು ಸ್ಥಳದಲ್ಲೇ ಮೃತ ಪಟ್ಟು, ಗಂಭೀರ ಗಾಯಗೊಂಡಿದ್ದ ಶ್ರೇಯಾ ಜಿಲ್ಲಾಸ್ಪತ್ರೆಯಲ್ಲಿ ಮೃತಟ್ಟಿದ್ದಾರೆನ್ನಲಾಗಿದೆ. ಚಿಕ್ಕಮಗಳೂರು ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.