‘ಸಿಎಂ ಸಿದ್ದರಾಮಯ್ಯನವರೇ ರಾಜೀನಾಮೆ ಕೊಟ್ಟು ರಾಜ್ಯವನ್ನ ಉಳಿಸಿ’- ಅಶೋಕ್

(ನ್ಯೂಸ್‌ ಕಡಬ) newskadaba.com,  ಸೆ.06 ಬೆಂಗಳೂರು: ಸಿಎಂ ಸಿದ್ದರಾಮಯ್ಯನವರೇ ಇನ್ನೆಷ್ಟು ದಿನ ಈ ಭಂಡ ಬಾಳು? ರಾಜೀನಾಮೆ ಕೊಟ್ಟು ರಾಜ್ಯವನ್ನು ಉಳಿಸಿ ಎಂದು ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಟೀಕಿಸಿದ್ದಾರೆ.

ಅನುದಾನಕ್ಕಾಗಿ ಸಚಿವ ಚಲುವರಾಯಸ್ವಾಮಿ ಸಿಎಂಗೆ ಮನವಿ ವಿಚಾರದ ಕುರಿತು ಎಕ್ಸ್‌ನಲ್ಲಿ ಪ್ರತಿಕ್ರಿಯೆ ನೀಡಿದ ಅವರು, “ರಾಜ್ಯ ಸರ್ಕಾರದ ಕೃಷಿ ಸಚಿವರು, ನಾಲ್ಕನೇ ಬಾರಿಗೆ ಶಾಸಕರಾಗಿ ಆರಿಸಿ ಬಂದಿರುವವರು ತಮ್ಮ ಕ್ಷೇತ್ರದ ಪರಿಶಿಷ್ಟ ಪಂಗಡಗಳ ಕಾಲೋನಿ ಅಭಿವೃದ್ಧಿಗೆ ಕೇವಲ 2 ಕೋಟಿ ರೂಪಾಯಿ ಅನುದಾನ ಪಡೆಯಲು ಮುಖ್ಯಮಂತ್ರಿಗಳ ಬಳಿ ಅಂಗಲಾಚಬೇಕು ಅಂದರೆ ಕರ್ನಾಟಕ ಸರ್ಕಾರ ಎಷ್ಟು ದಿವಾಳಿ ಆಗಿದೆ ಅನ್ನುವುದನ್ನ ನೀವೇ ಊಹಿಸಿಕೊಳ್ಳಿ” ಎಂದು ತಿಳಿಸಿದ್ದಾರೆ.

“ಕೋಲಾರ ಶಾಸಕ ಕೊತ್ತೂರು ಮಂಜುನಾಥ್ ಅವರು, ಅನುದಾನಕ್ಕಾಗಿ ಮುಖ್ಯಮಂತ್ರಿಗಳ ಕಾಲಿಗೆ ಬೀಳಬೇಕು ಎನ್ನುತ್ತಾರೆ. ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರಾದ ಬಸವರಾಜ ರಾಯರೆಡ್ಡಿ ಅವರು, ನಿಮಗೆ ರಸ್ತೆ ಬೇಕಾದ್ರೆ ಗ್ಯಾರೆಂಟಿ ಯೋಜನೆ ಬಂದ್ ಮಾಡ್ತೀವಿ ಎನ್ನುತ್ತಾರೆ. ಶಾಸಕ ಗವಿಯಪ್ಪನವರಂತೂ ಪಾಪ ಒಂದು ಹೆಜ್ಜೆ ಮುಂದೆ ಹೋಗಿ ಇದೇ ರೀತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ವಿಧಾನಸೌಧದ ಮುಂದೆ ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ” ಎಂದು ಪೋಸ್ಟ್ ಮಾಡಿದ್ದಾರೆ.

“ಇನ್ನು ಶಾಸಕರಾದ ಬಿ.ಆರ್. ಪಾಟೀಲರು, ರಾಜು ಕಾಗೆ ಅವರು ಸೇರಿದಂತೆ ಅನೇಕ ಶಾಸಕರು ಅನುದಾನವಿಲ್ಲದೆ ತಮ್ಮ ಕ್ಷೇತ್ರಗಳಲ್ಲಿ ತಲೆ ಎತ್ತಿಕೊಂಡು ಓಡಾಡಲೂ ಆಗುತ್ತಿಲ್ಲ ಅಂತಾರೆ. ಈ ಬಗ್ಗೆ ಸೂಪರ್ ಸಿಎಂ ಸುರ್ಜೆವಾಲಾ ಅವರಿಗೆ ದೂರು ಕೊಟ್ಟಿರುವುದನ್ನ ಮಾಧ್ಯಮಗಳು ಬಿತ್ತರಿಸಿವೆ. ಇನ್ನೆಷ್ಟು ದಿನ ಸಿಎಂ ಸಿದ್ದರಾಮಯ್ಯನವರೇ ಈ ಭಂಡ ಬಾಳು. ರಾಜೀನಾಮೆ ಕೊಟ್ಟು ರಾಜ್ಯವನ್ನು ಉಳಿಸಿ” ಎಂದು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

Scroll to Top