ಆಯೋಗ ಪ್ರಕಟಿಸಿರುವ ಪಟ್ಟಯಿಂದ 107 ಹೊಸ ಜಾತಿಗಳ ಹೆಸರು ಕೈಬಿಡಿ: ಹಿಂದುಳಿದ ಆಯೋಗಕ್ಕೆ ಬಿಜೆಪಿ ಮನವಿ

(ನ್ಯೂಸ್‌ ಕಡಬ) newskadaba.com, ಸೆ. 03: ಬೆಂಗಳೂರು: ಜಾತಿ ಸಮೀಕ್ಷೆಗೆ ಸಂಬಂಧಪಟ್ಟಂತೆ ಹಿಂದುಳಿದ ವರ್ಗಗಳ ಆಯೋಗ ಪ್ರಕಟಿಸಿದ 1,400 ಜಾತಿಗಳ ಪಟ್ಟಿಯಲ್ಲಿ 107 ಹೊಸ ಜಾತಿಗಳನ್ನು ಸೇರಿಸಲಾಗಿದೆ. ಇದುವರೆಗಿನ ಯಾವುದೇ ಜಾತಿ ಪಟ್ಟಿಯಲ್ಲಿ ಇಲ್ಲದ, ಯಾವುದೇ ಆಯೋಗದ ಜಾತಿ ಪಟ್ಟಿಯಲ್ಲಿ ಇಲ್ಲದ ಹೊಸ ಜಾತಿಗಳನ್ನು ಸೃಷ್ಟಿಸಿದ್ದಾರೆ.

ಕುರುಬ ಕ್ರಿಶ್ಚಿಯನ್‌, ಮಡಿವಾಳ ಕ್ರಿಶ್ಚಿಯನ್‌, ಒಕ್ಕಲಿಗ ಕ್ರಿಶ್ಚಿಯನ್‌ ಎಂದು ಹೆಸರಿಸಲಾಗಿದೆ; ಇದನ್ನು ಒಪ್ಪಲಾಗದು ಎಂದು ಬಿಜೆಪಿ ನಿಯೋಗ ಹೇಳಿದೆ ಜಾತಿ ಸಮೀಕ್ಷೆಗೆ ಸಂಬಂಧಿಸಿ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರನ್ನು ಭೇಟಿ ಮಾಡಿರುವ ಬಿಜೆಪಿ, ಹಿಂದುಳಿದ ವರ್ಗಗಳ ನಿಯೋಗವು ತರಾತುರಿಯಲ್ಲಿ ಸಮೀಕ್ಷೆ ಪೂರ್ಣಗೊಳಿಸುವ ಹಠ ಬೇಡ ಎಂದು ಆಗ್ರಹಿಸಿದೆ. ಪಟ್ಟಿಯಲ್ಲಿ ಸೇರ್ಪಡೆಯಾಗಿರುವ ಹೊಸ ಜಾತಿಗಳು ಮತಾಂತರಕ್ಕೆ ಪ್ರೇರಣೆ ನೀಡುವ ಅಪಾಯವಿದೆ ಎಂದು ಆತಂಕ ವ್ಯಕ್ತಪಡಿಸಿದೆ.

ಆಯೋಗದ ಅಧ್ಯಕ್ಷ ಮಧುಸೂದನ್‌ ಆರ್‌. ನಾಯಕ್‌ ಜತೆಗೆ ಸುದೀರ್ಘ‌ ಚರ್ಚೆ ನಡೆಸಿದ ಮಾಜಿ ಸಚಿವ, ಶಾಸಕ ಸುನಿಲ್‌ಕುಮಾರ್‌, ಸಂಸದ ಪಿ.ಸಿ. ಮೋಹನ್‌, ಬಿಜೆಪಿ ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ, ವಿಧಾನಸಭಾ ವಿಪಕ್ಷ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ್‌, ವಿಧಾನಪರಿಷತ್‌ ವಿಪಕ್ಷ ಮುಖ್ಯ ಸಚೇತಕ ಎನ್‌. ರವಿಕುಮಾರ್‌, ಬಿಜೆಪಿ ರಾಜ್ಯ ಕಾರ್ಯದರ್ಶಿ ಅಂಬಿಕಾ ಹುಲಿನಾಯ್ಕರ್‌, ಒಬಿಸಿ ಮೋರ್ಚಾ ರಾಜ್ಯಾಧ್ಯಕ್ಷ ರಘು ಕೌಟಿಲ್ಯ ಅವರನ್ನು ಒಳಗೊಂಡ ನಿಯೋಗವು ಈ ಹಿಂದಿನ ಯಾವುದೇ ಆಯೋಗ ಹೆಸರಿಸದ ಹೊಸ ಜಾತಿಗಳನ್ನು ಜಾತಿ ಪಟ್ಟಿಯಲ್ಲಿ ಸೇರಿಸಿರುವ ಬಗ್ಗೆಯೂ ಆಕ್ಷೇಪ ವ್ಯಕ್ತಪಡಿಸಿದೆ.

15 ದಿನಗಳಲ್ಲಿ ಮತ್ತು ದಸರಾ ಸಂದರ್ಭದಲ್ಲಿ ಸಮೀಕ್ಷೆ ಮುಗಿಸುತ್ತೇವೆ ಎಂಬುದು ಸರಿಯಲ್ಲ. ಯಾವುದೋ ಒತ್ತಡಕ್ಕೆ ಒಳಗಾಗಿ ಸಮೀಕ್ಷೆ ಮಾಡುವುದು ಬೇಡ. ಸುಮಾರು 2 ಕೋಟಿ ಮನೆಗಳ ಸಮೀಕ್ಷೆಯನ್ನು ದಸರಾ ರಜೆಯಲ್ಲಿ ಮಾಡಿ ಮುಗಿಸುತ್ತೇವೆ ಎಂದು ಹಠ ಹಿಡಿಯುವುದು ಸರಿಯಲ್ಲ. ಹೀಗಾಗಿ ಬೇಸಗೆ ರಜಾ ಕಾಲದಲ್ಲಿ ಸಮೀಕ್ಷೆ ಮಾಡಲು ಆಗ್ರಹಿಸಿದ್ದೇವೆ ಎಂದು ಸಾಸಕ ಸುನೀಲ್ ಕುಮಾರ್ ತಿಳಿಸಿದರು.

Scroll to Top