(ನ್ಯೂಸ್ ಕಡಬ) newskadaba.com, ಸೆ. 03 ಕಲಬುರಗಿ: ಸಿಮೆಂಟ್ ತುಂಬಿದ್ದ ಟ್ಯಾಂಕರ್ ಹಾಗೂ ಶಾಲಾ ಬಸ್ ನಡುವೆ ಅಪಘಾತ ಸಂಭವಿಸಿದ್ದು, ಆರು ವಿದ್ಯಾರ್ಥಿಗಳು ಗಾಯಗೊಂಡಿರುವ ಘಟನೆ ನಗರದ ಹೊರ ವಲಯದ ನಾಗನಹಳ್ಳಿ ರಿಂಗ್ ರಸ್ತೆಯಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ. ಚಂದ್ರಕಾಂತ ಪಾಟೀಲ ಪಬ್ಲಿಕ್ ಶಾಲೆಗೆ ಸೇರಿದ ಶಾಲಾ ವಾಹನ ರಾಮಮಂದಿರ ಕಡೆಯಿಂದ ನಾಗನಹಳ್ಳಿ ರಿಂಗ್ ರಸ್ತೆಯತ್ತ ಬರುತ್ತಿತ್ತು. ವಾಡಿಯಿಂದ ಸಿಮೆಂಟ್ ತುಂಬಿಕೊಂಡು ಹೊರಟ್ಟಿದ್ದ ವೇಳೆ ಅಪಘಾತ ಸಂಭವಿಸಿದೆ ಎಂದು ಮೂಲಗಳು ಹೇಳಿವೆ. ಅಪಘಾತದಲ್ಲಿ ಶಾಲಾ ವಾಹನದ ಮುಂಭಾಗ ನಜ್ಜುಗುಜ್ಜಾಗಿದ್ದು, ಮುಂದಿನ ಗಾಜು ಒಡೆದಿದೆ. ಘಟನೆ ಕಲಬುರಗಿ ನಗರ ಸಂಚಾರ ಪೊಲೀಸ್ ಠಾಣೆ-2ರ ವ್ಯಾಪ್ತಿಯಲ್ಲಿ ನಡೆದಿದೆ.
ಸದ್ಯ ಗಾಯಾಳುಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಘಟನೆ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಪಘಾತದಲ್ಲಿ ಪ್ರೀತಂ ನಿಂಗಣ್ಣ (6 ವರ್ಷ), ಸುಪ್ರೀತ್ (9 ವರ್ಷ), ಆದಿತ್ಯ (12 ವರ್ಷ), ವಿಕ್ರಾಂತ (14 ವರ್ಷ) ಸಾಯಿನಾಥ (13), ದಕ್ಷಿತ್ (7 ವರ್ಷ), ಗಾಯಕೊಂಡ ವಿದ್ಯಾರ್ಥಿಗಳೆಂದು ಗುರುತಿಸಲಾಗಿದೆ.













