(ನ್ಯೂಸ್ ಕಡಬ) newskadaba.com, ಸೆ.02: ಮಂಗಳೂರು: ಧರ್ಮಸ್ಥಳ ಪ್ರಕರಣದ ತನಿಖೆಗೆ ಇದೀಗ ಇಡಿ ಎಂಟ್ರಿಯಾಗಿದೆ. ಧರ್ಮಸ್ಥಳ ವಿರುದ್ಧ ಅಪಪ್ರಚಾರಕ್ಕೆ ವಿದೇಶದಿಂದ ಹಣ ಬಂದಿರುವ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ಫೆಮಾ ಮತ್ತು ಫೆರಾ ಆಕ್ಟ್ ಅಡಿಯಲ್ಲಿ ಕೇಸ್ ದಾಖಲಿಸಿಕೊಂಡು ಜಾರಿ ನಿರ್ದೇಶನಾಲಯ (ಇಡಿ) ತನಿಖೆಗೆ ಮುಂದಾಗಿದೆ.
ತೇಜಸ್ ಎ ಗೌಡ ಹಾಗೂ ಮತ್ತೊಬ್ಬರ ದೂರು ಆಧರಿಸಿ ಇಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದೆ. ಈಗಾಗಲೇ ಧರ್ಮಸ್ಥಳ ಪ್ರಕರಣವನ್ನು ಎಸ್ಐಟಿ ತನಿಖೆ ಮಾಡುತ್ತಿದೆ. ಇದರ ನಡುವೆಯೇ ಈಗ ಧರ್ಮಸ್ಥಳ ಪ್ರಕರಣಕ್ಕೆ ಇಡಿ ಕೂಡ ಎಂಟ್ರಿಯಾಗಿದೆ.
ಕೆಲ ಎನ್‌ಜಿಒಗಳಿಗೆ ವಿದೇಶದಿಂದ ಫಂಡಿಂಗ್ ಆಗಿದೆ ಎಂಬ ಆರೋಪಗಳು ಕೇಳಿಬಂದಿವೆ. ಹೀಗಾಗಿ ಒಡನಾಡಿ ಹಾಗೂ ಸಂವಾದ ಸಂಸ್ಥೆಯ ಹಣಕಾಸಿನ ವಹಿವಾಟು ಬಗ್ಗೆ ಪರಿಶೀಲಿಸಲು ಇಡಿ ಮುಂದಾಗಿದೆ. ಈ ಬಗ್ಗೆ ಮಾಹಿತಿ ಕೋರಿ ಎಸ್ಬಿಐ ಸೇರಿ ಇತರೆ ಬ್ಯಾಂಕ್‌ಗಳಿಗೆ ಪ್ಯಾನ್ ಹಾಗೂ ಅಕೌಂಟ್ಗಳ ಕುರಿತು ಪತ್ರ ಬರೆಯಲಾಗಿದೆ. ಕಳೆದ 5 ವರ್ಷಗಳ ಟ್ರಾನ್ಸಾಕ್ಷನ್ ಬಗ್ಗೆ ನೀಡುವಂತೆ ಮನವಿ ಮಾಡಲಾಗಿದೆ.
ವಿದೇಶದಿಂದ ಹಣ ಬಂದಿರುವ ಕುರಿತು ಮಾಹಿತಿ ಹಾಗೂ ಅದಕ್ಕೆ ಸಂಬಂಧಿಸಿದ ದಾಖಲೆ ನೀಡುವಂತೆ ಬ್ಯಾಂಕ್‌ಗಳಿಗೆ ಪತ್ರದ ಮೂಲಕ ಮನವಿ ಮಾಡಲಾಗಿದೆ. ಮಾಹಿತಿ ಸಂಗ್ರಹವಾದ ಮೇಲೆ ಮುಂದಿನ ಕ್ರಮವನ್ನು ಇಡಿ ಅಧಿಕಾರಿಗಳು ಕೈಗೊಳ್ಳಲಿದ್ದಾರೆ.









