(ನ್ಯೂಸ್ ಕಡಬ) newskadaba.com ಕಡಬ, ಎ.17. ಶ್ರೀ ಕಡಂಬಳಿತ್ತಾಯ ಸ್ವಾಮಿ ಮತ್ತು ಶ್ರೀ ಪುರುಷ ದೈವ ಹಾಗೂ ಇತರ ದೈವಗಳ ನೇಮೋತ್ಸವ ಎಪ್ರಿಲ್ 15 ರಿಂದ ಕೊಡಿಯೇರುವ ಮೂಲಕ ಪ್ರಾರಂಭಗೊಂಡಿದ್ದು, ವಿಶೇಷ ದೈವಾರಾಧನೆಯೊಂದಿಗೆ ನಡೆಯುತ್ತಿದೆ. ಮಂಗಳವಾರದಂದು ಮಾಡ ದೈವಸ್ಥಾನದಿಂದ ಮುಡಿ ಆಗುವ ಮಜಲಿಗೆ ಪಯ್ಯೋಳಿಗೆ ಹೋಗಿ ಬರಲಾಯಿತು.
ವರ್ಷಂಪ್ರತಿ ಜರಗುವ ಕಡಬ ಜಾತ್ರೆಯು ಈ ಭಾಗದ ಪ್ರಸಿದ್ಧ ಆಯನವಾಗಿದ್ದು, ಊರ – ಪರವೂರ ಅದೆಷ್ಟೋ ಭಕ್ತಾದಿಗಳು ಜಾತ್ರೆಯಲ್ಲಿ ಪಾಲ್ಗೊಂಡು ದೈವದ ಭಕ್ತಿಗೆ ಪಾತ್ರರಾಗುತ್ತಿದ್ದಾರೆ. ಶ್ರೀ ಕಡಂಬಳಿತ್ತಾಯ ಹಾಗೂ ಪುರುಷ ದೈವ ಹಾಗೂ ಇತರ ದೈವಗಳ ಪ್ರಧಾನ ಆಡಳಿತದಾರ ಕಡಬ ಗುತ್ತು ರಾಜೇಂದ್ರ ಹೆಗ್ಡೆಯವರ ನೇತೃತ್ವದಲ್ಲಿ ನಡೆಯುವ ಜಾತ್ರೋತ್ಸವ ಸಮಿತಿಯ ಅಧ್ಯಕ್ಷ ಧರಣೇಂದ್ರ ಜೈನ್, ಕಡಂಬಳಿತ್ತಾಯ ಸ್ವಾಮಿ ಆಡಳಿತದಾರ ತಮ್ಮಯ್ಯ ನಾಯ್ಕ್, ಮೋನಪ್ಪ ಕುಂಭಾರ ಪಾಳೋಲಿ, ಕಾರ್ಯದರ್ಶಿ ಲಕ್ಷ್ಮೀಶ ಗೌಡ ಆರಿಗ, ಜೊತೆ ಕಾರ್ಯದರ್ಶಿ ಮನೋಜ್ ಕುಮಾರ್ ಆರಿಗ, ಕೋಶಾಧಿಕಾರಿ ರಮೇಶ್ ರಾವ್ ಸೇರಿದಂತೆ ಆಡಳಿತ ಮಂಡಳಿ ಪದಾಧಿಕಾರಿಗಳು, ಊರ – ಪರವೂರ ಭಕ್ತಾದಿಗಳು ಪಾಲ್ಗೊಳ್ಳುತ್ತಿದ್ದಾರೆ. ಜಾತ್ರೋತ್ಸವದ ಅಂಗವಾಗಿ ಮಾಡ ದೈವಸ್ಥಾನವು ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದೆ.