ಕಡಬ: ಭಾರೀ ಗಾಳಿ ಮಳೆಗೆ ಅಪಾರ ಕೃಷಿ ಹಾನಿ ► ಲಕ್ಷಾಂತರ ರೂ. ನಷ್ಟ

(ನ್ಯೂಸ್ ಕಡಬ) newskadaba.com ಕಡಬ, ಎ.17. ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಭಾರೀ ಗಾಳಿ ಮಳೆಗೆ ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸ್ತಿ ಪ್ರದೇಶದಲ್ಲಿ ಅಪಾರ ಕೃಷಿ ಹಾನಿಯಾಗಿದೆ.

ಬದಿಬಾಗಿಲು ಬಸ್ತಿ ನಿವಾಸಿ ಉದಯಕುಮಾರ್ ಜೈನ್ ಎಂಬವರಿಗೆ ಸೇರಿದ 12 ರಿಂದ ಹದಿನೈದು ವರ್ಷ ವಯೋಮಾನದ ಫಲಭರಿತ ಐದು ನೂರಕ್ಕೂ ಹೆಚ್ಚು ಅಡಕೆ ಮರಗಳು ಧರಾಶಾಯಿಯಾಗಿವೆ. ಭಾನುವಾರ ಸಂಜೆ ವೇಳೆ ಏಕಾಏಕಿಯಾಗಿ ಬೀಸಿದ ಸುಂಟರ ಗಾಳಿ ತೋಟದ ಮಧ್ಯೆ ಮಧ್ಯೆ ಇರುವ ಅಡಕೆ ಮರಗಳನ್ನು ಆಹುತಿ ಪಡೆದಿದೆ. ಇದರಿಂದಾಗಿ ಲಕ್ಷಾಂತರ ರೂ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. ಮಾತ್ರವಲ್ಲದೆ ಈ ಭಾಗದ ಹಲವು ರೈತರ ತೋಟಗಳಲ್ಲಿ ಹತ್ತರಿಂದ ಹದಿನೈದು ಅಡಕೆ ಮರಗಳು, ತೆಂಗಿನ ಮರಗಳು ಸೇರಿದಂತೆ ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿವೆ. ನೂಜಿಬಾಳ್ತಿಲ ಗ್ರಾಮದ ಬದಿಬಾಗಿಲು ಬಸ್ತಿ ರಸ್ತೆಯಲ್ಲಿ ವಿದ್ಯುತ್ ಕಂಬಗಳು ತುಂಡಾಗಿ ರಸ್ತೆಗೆ ಬಿದ್ದು ಕಲ್ಲುಗುಡ್ಡೆಯಿಂದ ಪುತ್ತೂರಿಗೆ ಬೆಳಿಗ್ಗೆ ಹೋಗುವ ಸರಕಾರಿ ಬಸ್ ರೆಂಜಿಲಾಡಿಯ ಗೋಳಿಯಡ್ಕ- ಇಚಿಲಂಪಾಡಿ ರಾಜ್ಯ ಹೆದ್ದಾರಿಯಲ್ಲಿ ಹೋಗಬೇಕಾಯಿತು.

Also Read  ಗೃಹರಕ್ಷಕ ಕ್ಷೇಮಾಭಿವೃದ್ದಿ ನಿಧಿಯಿಂದ ಸಹಾಯ ಧನ

ಕಡಬ ತಾಲೂಕಿಗೊಳಪಟ್ಟ ಸುಬ್ರಹ್ಮಣ್ಯ, ಕೈಕಂಬ, ಬಿಳಿನೆಲೆ, ನೆಟ್ಟಣ, ಮರ್ಧಾಳ, ನೂಜಿಬಾಳ್ತಿಲ, ಇಚಿಲಂಪಾಡಿ, ಕೊಣಾಜೆ, ಕೋಡಿಂಬಾಳ, ಹೊಸ್ಮಠ, ಬಲ್ಯ, ಕುಂತೂರು, ಆಲಂಕಾರು ಸೇರಿದಂತೆ ಹಲವೆಡೆ ಗುಡುಗು ಸಹಿತ ಧಾರಾಕಾರ ಮಳೆಯಾಗಿದ್ದು, ಹಲವೆಡೆ ಕೃಷಿಗೆ ಹಾನಿಯಾಗಿದ್ದು ಅಪಾರ ನಷ್ಟ ಉಂಟಾಗಿದೆ. ಅಲ್ಲಲ್ಲಿ ವಿದ್ಯುತ್ ಕಂಬಗಳು ಉರುಳಿ ಬಿದ್ದು ವಿದ್ಯುತ್ ಕೈಕೊಟ್ಟಿದ್ದರಿಂದಾಗಿ ಜನತೆ ಕತ್ತಲಲ್ಲಿ ಕಾಲ ಕಳೆಯುವಂತಾಗಿದ್ದು, ದೂರವಾಣಿ ಸಂಪರ್ಕವು ಕಡಿತಗೊಂಡಿದೆ. ಕಂದಾಯ ಅಧಿಕಾರಿಗಳು ಅನಾಹುತ ಸಂಭವಿಸಿದ ಸ್ಥಳಗಳಿಗೆ ಬೇಟಿ ನೀಡಿ ಪರಿಶೀಲಿಸಿದ್ದಾರೆ. ಮೆಸ್ಕಾಂ ಇಲಾಖಾಧಿಕಾರಿಗಳು, ಸಿಬ್ಬಂದಿಗಳು ತುರ್ತು ನಿಗವಹಿಸಿ ವಿದ್ಯುತ್ ಸಂಪರ್ಕವನ್ನು ಮತ್ತೆ ಯತಾಃಸ್ಥಿತಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ.

Also Read  ಗ್ರಾಮ ಪಂಚಾಯತ್‌ ಚುನಾವಣೆ ದಿನಾಂಕ ಘೋಷಣೆ ➤ ಡಿ. 22 ಮತ್ತು ಡಿ.27ರಂದು ಚುನಾವಣೆ

error: Content is protected !!
Scroll to Top