(ನ್ಯೂಸ್ ಕಡಬ) newskadaba.com, ಆ.29: ಕರ್ನಾಟಕಕ್ಕೆ ಕೇಂದ್ರ ಸರ್ಕಾರ ಇದೀಗ ಗಣೇಶ ಹಬ್ಬದ ಉಡುಗೊರೆ ನೀಡಿದೆ. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರ ಒತ್ತಾಸೆಯಂತೆ ಹುಬ್ಬಳ್ಳಿ–ಜೋಧಪುರ್ ನಡುವೆ ನೇರ ರೈಲು ಸಂಚಾರವನ್ನು ಘೋಷಣೆ ಮಾಡಿದೆ.
ಸೆಪ್ಟೆಂಬರ್ ತಿಂಗಳಿನಿಂದಲೇ ಹುಬ್ಭಳ್ಳಿ–ಜೋಧಪುರ್ ವಿಶೇಷ ರೈಲು ಸಂಚಾರ ಶುರು ಮಾಡಲಿದೆ. ವಿಶೇಷ ರೈಲಾಗಿರುವ ಇದನ್ನು ಮುಂದಿನ ದಿನಗಳಲ್ಲಿ ನಿತ್ಯ ಸಂಚಾರದ ರೈಲನ್ನಾಗಿ ಪರಿವರ್ತನೆಗೊಳಿಸುವ ಬಗ್ಗೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಭರವಸೆ ನೀಡಿದ್ದಾರೆ ಎಂದು ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ.
ಈ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಬರೆದುಕೊಂಡ ಅವರು, ಗಣೇಶ ಹಬ್ಬದ ಈ ಶುಭ ಸಂದರ್ಭದಲ್ಲಿ ಹುಬ್ಬಳ್ಳಿಯ ಜನತೆಗೆ ಸಂತಸದ ವಿಷಯ. ನಮ್ಮ ಭಾಗದ ಬಹು ಜನರ ಬೇಡಿಕೆಯಾಗಿದ್ದ ಹುಬ್ಬಳ್ಳಿ- ಜೋಧಪುರ್ ನೇರ ರೈಲು ಮುಂದಿನ ತಿಂಗಳಿನಿಂದ ಪ್ರಾರಂಭವಾಗಲಿದೆ. ಈ ಕುರಿತು ನಾನು ನಿರಂತರವಾಗಿ ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ ಅವರೊಂದಿಗೆ ಸಂಪರ್ಕದಲ್ಲಿದ್ದು, ಮನವಿ ಸಲ್ಲಿಸಿದ್ದೆ. ಈಗ ನಮ್ಮ ಮನವಿಗೆ ಸ್ಪಂದಿಸಿದ ಸಚಿವರು ಹುಬ್ಬಳ್ಳಿಯಿಂದ ಜೋಧ್‌ಪುರಕ್ಕೆ ನೇರ ರೈಲು ಆರಂಭಕ್ಕೆ ಅನುಮೋದನೆ ನೀಡಿದ್ದಾರೆ ಎಂದಿದ್ದಾರೆ.
ರೈಲು ಸಂಖ್ಯೆ: 07359 UBL (ಹುಬ್ಬಳ್ಳಿ) ಯಿಂದ 7:30ಕ್ಕೆ ತೆರಳಿ ಬೆಳಿಗ್ಗೆ 5:30ಕ್ಕೆ BGKT (ಭಗತ ಕಿ ಕೋಟಿ)ಗೆ ತಲುಪಲಿದೆ. ಪ್ರತಿ ರವಿವಾರ ಸಂಚರಿಸುವ ಈ ರೈಲಿನ ಟಿಕೆಟ್ ಬುಕಿಂಗ್ ಈಗಾಗಲೇ ಆರಂಭವಾಗಿದೆ. ಪ್ರಸ್ತುತ ಇದು ವಿಶೇಷ ರೈಲಾಗಿದ್ದು ಇದನ್ನು ನಿಯತಕಾಲಿಕವಾಗಿ ಪರಿವರ್ತಿಸಲಾಗುವುದು ಎಂದು ಹೇಳಿದ್ದಾರೆ.
ನಮ್ಮ ಮನವಿಗೆ ಸ್ಪಂದಿಸುತ್ತ ಈ ಭಾಗದ ರೈಲ್ವೆ ಅಭಿವೃದ್ಧಿಗೆ ವಿಶೇಷ ಆಸಕ್ತಿ ಹೊಂದಿರುವ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ ಹಾಗೂ ಕೇಂದ್ರ ರೈಲ್ವೆ ರಾಜ್ಯ ಸಚಿವರಾದ ವಿ.ಸೋಮಣ್ಣ ಅವರಿಗೆ ಅನಂತ ಧನ್ಯವಾದಗಳು ಎಂದು ತಿಳಿಸಿದ್ದಾರೆ.












