(ನ್ಯೂಸ್ ಕಡಬ) newskadaba.com ವಿಟ್ಲ, ಎ.16. ಆಸಿಫಾ ಪ್ರಕರಣದಲ್ಲಿ ನ್ಯಾಯಕ್ಕಾಗ್ರಹಿಸಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸುತ್ತಿದ್ದಾರೆ ಎಂಬ ಆರೋಪದ ಮೇರೆಗೆ ಸ್ಥಳಕ್ಕೆ ತೆರಳಿದ ವಿಟ್ಲ ಪೊಲೀಸರಿಗೆ ಸ್ಥಳೀಯ ಯುವಕರು ದಿಗ್ಬಂಧನ ವಿಧಿಸಿದ ಘಟನೆ ಸೋಮವಾರದಂದು ಕರ್ನಾಟಕ – ಕೇರಳ ಗಡಿಯ ಆನೇಕಲ್ ಎಂಬಲ್ಲಿ ನಡೆದಿದೆ.
ಇತ್ತೀಚೆಗೆ ಜಮ್ಮು ಕಾಶ್ಮೀರದ ಕಥುವಾ ಎಂಬಲ್ಲಿ ಮತಾಂಧ ಶಕ್ತಿಗಳ ಕೈಯಲ್ಲಿ ನಲುಗಿ ಅತ್ಯಾಚಾರಕ್ಕೊಳಗಾಗಿ ಬರ್ಬರವಾಗಿ ಹತ್ಯೆಗೀಡಾದ ಎಂಟರ ಹರೆಯದ ಬಾಲೆ ಆಸಿಫಾ ಪ್ರಕರಣಕ್ಕೆ ನ್ಯಾಯಕ್ಕಾಗ್ರಹಿಸಿ ಸೋಮವಾರದಂದು ಕೇರಳದಾದ್ಯಂತ ಸ್ವಯಂ ಪ್ರೇರಿತ ಬಂದ್ ನಡೆದಿದ್ದು, ಈ ಸಂದರ್ಭದಲ್ಲಿ ಯುವಕರ ಗುಂಪೊಂದು ಬಲಾತ್ಕಾರವಾಗಿ ಅಂಗಡಿಗಳನ್ನು ಮುಚ್ಚಿಸುತ್ತಿದ್ದಾರೆ ಎಂಬ ಆರೋಪಿಸಿ ವಿಟ್ಲ ಠಾಣೆಗೆ ದೂರು ಬಂದಿತ್ತೆನ್ನಲಾಗಿದೆ. ಅದರಂತೆ ಸ್ಥಳಕ್ಕೆ ತೆರಳಿದ ವಿಟ್ಲ ಪೊಲೀಸರಿಗೆ ಗುಂಪೊಂದು ದಿಗ್ಬಂಧನ ವಿಧಿಸಿದ್ದಲ್ಲದೆ ಕರ್ತವ್ಯಕ್ಕೆ ಅಡ್ಡಿಪಡಿಸುವ ದೃಶ್ಯಗಳನ್ನು ಯಾರೋ ಸೆರೆಹಿಡಿದಿದ್ದು, ಅದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ನಡುವೆ ವಿಟ್ಲದ ಕನ್ಯಾನ ಸಮೀಪದ ಬೈರಿಕಟ್ಟೆ ಎಂಬಲ್ಲಿ ಕೆಎಸ್ಸಾರ್ಟಿಸಿ ಬಸ್ಸೊಂದಕ್ಕೆ ಕಿಡಿಗೇಡಿಗಳು ಕಲ್ಲೆಸೆದಿದ್ದು, ಬಸ್ಸಿನ ಮುಂಭಾಗದ ಗಾಜು ಹುಡಿಯಾಗಿದೆ. ಸ್ಥಳದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.