(ನ್ಯೂಸ್ ಕಡಬ) newskadaba.com, ಆ.26 ಬೆಂಗಳೂರು: ಕರ್ನಾಟಕ ರಾಜ್ಯ ಫುಟ್ಬಾಲ್ ಸಂಸ್ಥೆ(ಕೆಎಸ್ಎಫ್ಎ)ಗೆ ಶೀಘ್ರದಲ್ಲೇ ಬೆಂಗಳೂರಿನಲ್ಲಿ ಹೊಸ ಫುಟ್ಬಾಲ್ ಕ್ರೀಡಾಂಗಣ ಬರಲಿದೆ ಎಂದು ಕೆಎಸ್ಎಫ್ಎ ಅಧ್ಯಕ್ಷ, ಶಾಂತಿನಗರ ಶಾಸಕ ಎನ್.ಎ.ಹ್ಯಾರಿಸ್ ಭರವಸೆ ನೀಡಿದ್ದಾರೆ.ನಗರದಲ್ಲಿ ಈಗಾಗಲೇ ಪಾಳುಬಿದ್ದಂತಿರುವ ಫುಟ್ಬಾಲ್ ಕ್ರೀಡಾಂಗಣದ ದುರವಸ್ಥೆ ಬಗ್ಗೆ ಸೋಮವಾರ ಪ್ರೆಸ್ಕ್ಲಬ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಎದುರಾದ ಪ್ರಶ್ನೆಗೆ ಹ್ಯಾರಿಸ್ ಉತ್ತರಿಸಿದರು. ‘ಫುಟ್ಬಾಲ್ ಕ್ರೀಡಾಂಗಣ ಆದಷ್ಟು ಬೇಗ ಆಗುತ್ತದೆ. ಟೆಂಡರ್ ಕೂಡಾ ಆಗಿದೆ. ಸರ್ಕಾರ, ನಾವು ಕೂಡಾ ಪ್ರಯತ್ನಿಸುತ್ತಿದ್ದೇವೆ’ ಎಂದರು.
ಕಂಠೀರವ ಕ್ರೀಡಾಂಗಣದಲ್ಲಿ ನಿಗದಿಯಾಗಿದ್ದ ಎಎಫ್ಸಿ ಏಷ್ಯನ್ ಕಪ್ ಅರ್ಹತಾ ಟೂರ್ನಿಯ ಪಂದ್ಯ ಎತ್ತಂಗಡಿ ಆಗಿರುವ ಬಗ್ಗೆ ಪ್ರಶ್ನೆಗೆ ಉತ್ತರಿಸಿದ ಅವರು, ‘ಕಂಠೀರವ ಕ್ರೀಡಾಂಗಣವನ್ನು ಎಲ್ಲಾ ಕ್ರೀಡೆಗೂ ಬಳಸಲಾಗುತ್ತದೆ. ಅಲ್ಲಿ ಅಥ್ಲೆಟಿಕ್ಸ್ ನಡೆಯುತ್ತಿದೆ. ಇದರ ನಡುವೆ ಪಂದ್ಯದ ಆತಿಥ್ಯ ಸಿಕ್ಕಿತ್ತು. ಈಗ ಪಂದ್ಯ ಸ್ಥಳಾಂತರಗೊಂಡಿದ್ದಕ್ಕೆ ನೋವಿದೆ. ಆದರೆ ಅದು ನಮ್ಮ ನಿಯಂತ್ರಣದಲ್ಲಿಲ್ಲ. ಶೀಘ್ರದಲ್ಲೇ ಬೆಂಗಳೂರಿನಲ್ಲೇ ಕರ್ನಾಟಕ ಫುಟ್ಬಾಲ್ ಸಂಸ್ಥೆಗೆ ಹೊಸ ಕ್ರೀಡಾಂಗಣ ಬರಲಿದೆ. ಅದಕ್ಕಾಗಿ ಪ್ರಯತ್ನಿಸುತ್ತಿದ್ದೇವೆ’ ಎಂದು ಹೇಳಿದರು.











