ಆಸಿಫಾಳ ಹತ್ಯೆಯನ್ನು ಖಂಡಿಸಿ ದೇಶಕ್ಕೇ ಮಾನವೀಯ ಸಂದೇಶವನ್ನು ನೀಡಿದ ಹಿಂದೂ ಬಾಂಧವರು ► ವಿಷು ಹಬ್ಬವನ್ನು ರದ್ದುಗೊಳಿಸಿ ದೇವಸ್ಥಾನದ ಮುಂಭಾಗದಲ್ಲಿ ಮೊಂಬತ್ತಿ ಬೆಳಗಿಸಿ ಶ್ರದ್ಧಾಂಜಲಿ

(ನ್ಯೂಸ್ ಕಡಬ) newskadaba.com ಕಾಸರಗೋಡು, ಎ.15. ದೇಶದಲ್ಲಿ ಜಾತಿ ಜಾತಿಗಳ ನಡುವೆ ವಿಷ ಬೀಜ ಬಿತ್ತಿ ಧರ್ಮವನ್ನು ಅಮಲೇರಿಸಿ ಕೊಂಡವರಂತೆ ಬದುಕುವವರ ಮಧ್ಯೆ ಇಡೀ ದೇಶಕ್ಕೆ ಮಾನವೀಯತೆಯ ಸಂದೇಶವನ್ನು ನೀಡಿದ ಘಟನೆ ಕಾಸರಗೋಡು ಜಿಲ್ಲೆಯ ದೇವಸ್ಥಾನವೊಂದರಲ್ಲಿ ಭಾನುವಾರದಂದು ನಡೆದಿದೆ.

ಕೇರಳದಾದ್ಯಂತ ಇಂದು ಹಿಂದೂ ಧಾರ್ಮಿಕ ಹಬ್ಬವಾದ ವಿಷು ಆಚರಣೆಯ ಸಂಭ್ರಮದ ನಡುವೆಯೇ ಜಮ್ಮುವಿನ ಕಥುವಾದಲ್ಲಿ ನಡೆದ 8 ರ ಹರೆಯದ ಅಮಾಯಕ ಬಾಲೆ ಆಸಿಫಾಳನ್ನು 7 ದಿವಸಗಳ ಕಾಲ ಕ್ರೂರವಾಗಿ ಅತ್ಯಾಚಾರಗೈದು ಭೀಕರವಾಗಿ ಕೊಲೆಗೈದ ಕೃತ್ಯವನ್ನು ಖಂಡಿಸಿ ಕಾಸರಗೋಡು ಜಿಲ್ಲೆಯ ಕ್ಷೇತ್ರವೊಂದರಲ್ಲಿ ವಿಷು ಹಬ್ಬವನ್ನು ಆಚರಿಸದೆ, ಆಸಿಫಾಳ ಸಾವಿಗೆ ಶ್ರದ್ಧಾಂಜಲಿ ಅರ್ಪಿಸಿದ ಅಪರೂಪದ ಘಟನೆ ಇಡೀ ದೇಶಕ್ಕೆ ಮಾನವೀಯತೆಯ ಸಂದೇಶವನ್ನು ನೀಡಿದೆ. ಇಲ್ಲಿನ ಕೋಳಿಯಡ್ಕ ಮಹಾವಿಷ್ಣು ಕ್ಷೇತ್ರ ಸಮಿತಿಯು ಇಂದು ವಿಷು ಹಬ್ಬವನ್ನು ರದ್ದುಗೊಳಿಸಿ ದೇಶಕ್ಕೇ ಅದ್ಭುತ ಸಂದೇಶವನ್ನು ನೀಡಿದೆ. ದೇವಸ್ಥಾನದ ಮುಂಭಾಗದಲ್ಲಿ ಮಕ್ಕಳು, ಮಹಿಳೆಯರು “ಆಸಿಫಾಳ ಹಂತಕರಿಗೆ ಶಿಕ್ಷೆ ನೀಡಿ” ಎಂಬ ಬ್ಯಾನರ್ ಹಿಡಿದು, ಮೊಂಬತ್ತಿ ಬೆಳಗಿಸಿ ಹತ್ಯೆಯಾದ ಆಸಿಫಾಳಿಗೆ ಸಂತಾಪ ಸೂಚಿಸಿದರು. ಇದರೊಂದಿಗೆ ಅತ್ಯಾಚಾರಿ ಹಂತಕರು ಯಾವ ಧರ್ಮದವರೇ ಆಗಿರಲಿ ಅವರು ಕ್ರೂರ ಮೃಗಗಳು, ಅಂತಹ ಕ್ರೂರಿಗಳಿಗೆ ಯಾವ ಧರ್ಮವೂ ಬೆಂಬಲ ನೀಡಬಾರದೆಂಬ ಹೇಳಿಕೆಯನ್ನೂ ಕ್ಷೇತ್ರ ಸಮಿತಿ ನೀಡಿದೆ.

Also Read  ನಿಷೇಧಿತ ಎಂಡಿಎಂಎ ಮಾದಕ ವಸ್ತು ಮಾರಾಟ - ಬಿಕಾಂ ವಿದ್ಯಾರ್ಥಿ ಸಹಿತ ಮೂವರ ಬಂಧನ

error: Content is protected !!
Scroll to Top