ವರುಣನ ಆರ್ಭಟಕ್ಕೆ ಇಡೀ ರಾಜ್ಯವೇ ತತ್ತರ: ಅಪಾಯ ಮಟ್ಟ ಮೀರಿ ಹರಿಯುತ್ತಿದೆ ಹಲವು ನದಿಗಳು, ಪ್ರವಾಹದ ಎಚ್ಚರಿಕೆ



ನ್ಯೂಸ್‌ ಕಡಬ) newskadaba.com ಆ. 19.  ಬೆಂಗಳೂರು: ಕೊಡಗು, ಮಲೆನಾಡು, ಉತ್ತರ ಕರ್ನಾಟಕ, ಕರಾವಳಿ ಸೇರಿದಂತೆ ರಾಜ್ಯದಾದ್ಯಂತ ಮುಂಗಾರು ಮಳೆ ಅಬ್ಬರಿಸುತ್ತಿದ್ದು, ಅಧಿಕ ಮಳೆಯ ಪರಿಣಾಮವಾಗಿ ರಾಜ್ಯದ ಹಲವು ನದಿಗಳು, ಜಲಾಶಯಗಳು ಅಪಾಯ ಮಟ್ಟ ಮೀರಿ ಹರಿಯುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಹಲವು ಭಾಗಗಳಲ್ಲಿ ಪ್ರವಾಹದ ಎಚ್ಚರಿಕೆ ನೀಡಲಾಗಿದೆ.







ವರುಣನ ಅಬ್ಬರಕ್ಕೆ ಬೆಳಗಾವಿ ಜಿಲ್ಲೆಯ ಹಲವಾರು ಸೇತುವೆಗಳು ಮುಳುಗಡೆಯಾಗಿದ್ದು, ಗದಗ ಜಿಲ್ಲೆಯ ಮಲಪ್ರಭಾ ಜಲಾನಯನ ಪ್ರದೇಶದ ಅನೇಕ ಹಳ್ಳಿಗಳ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತಿದೆ. ಮಂಡ್ಯ ಜಿಲ್ಲಾಡಳಿತವು ರೈತರಿಗೆ ನದಿ ಜಲಾನಯನ ಪ್ರದೇಶದಲ್ಲಿ ಕೃಷಿ ಚಟುವಟಿಕೆಗಳನ್ನು ನಡೆಸದಂತೆ ಅಥವಾ ನದಿ ದಂಡೆಯ ಬಳಿ ಜಾನುವಾರುಗಳನ್ನು ಬಿಡದಂತೆ ಸೂಚಿಸಿದೆ.






ಬೆಳಗಾವಿ ಜಿಲ್ಲೆಯಲ್ಲಿ ಸೇತುವೆಗಳು ಮತ್ತು ರಸ್ತೆಗಳು ಜಲಾವೃತಗೊಂಡಿದ್ದು, ಹಲವಾರು ಹಳ್ಳಿಗಳಿಗೆ ಸಂಪರ್ಕ ಕಡಿತಗೊಂಡಿದೆ. ಮಹಾರಾಷ್ಟ್ರವು ತನ್ನ ಜಲಾಶಯಗಳಿಂದ ಹೊರಹರಿವು ಹೆಚ್ಚಿಸಿದ್ದರಿಂದ ಕೃಷ್ಣಾ ನದಿಯಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿ, ಚಿಕ್ಕೋಡಿ ತಾಲ್ಲೂಕು ಅತ್ಯಂತ ಹಾನಿಗೊಳಗಾಗಿದೆ. ಕಳೆದ ಎರಡು ದಿನಗಳಲ್ಲಿ ಕನಿಷ್ಠ ಎಂಟು ಸೇತುವೆಗಳು ಮುಳುಗಡೆಯಾಗಿದ್ದು, 16 ಪ್ರವಾಹ ಪೀಡಿತ ಗ್ರಾಮಗಳು ರಸ್ತೆ ಸಂಪರ್ಕವನ್ನು ಕಳೆದುಕೊಂಡಿವೆ.

67,000 ಕ್ಯೂಸೆಕ್ ಒಳಹರಿವು ಕೃಷ್ಣಾ ನದಿಯಲ್ಲಿ ದಾಖಲಾಗಿದ್ದರೆ,  38,000 ಕ್ಯೂಸೆಕ್ ಒಳಹರಿವು ಘಟಪ್ರಭಾ ನದಿಯಲ್ಲಿ ದಾಖಲಾಗಿದೆ.

ಈ ನಡುವೆ ಜಿಲ್ಲಾಡಳಿತ ಮಂಡಳಿಯು ಸೋಮವಾರ ಮತ್ತು ಮಂಗಳವಾರ ಬೆಳಗಾವಿ, ಸವದತ್ತಿ, ಬೈಲಹೊಂಗಲ, ಕಿತ್ತೂರು, ರಾಮದುರ್ಗ, ಖಾನಾಪುರ ಮತ್ತು ಹುಕ್ಕೇರಿ ತಾಲ್ಲೂಕುಗಳಲ್ಲಿನ ಶಾಲೆಗಳು, ಅಂಗನವಾಡಿಗಳು ಮತ್ತು ಪಿಯು ಕಾಲೇಜುಗಳಿಗೆ ರಜೆ ಘೋಷಿಸಿದೆ.

ಇನ್ನು ಘಟಪ್ರಭಾ ಮತ್ತು ಹಿರಣ್ಯಕೇಶಿ ನದಿಗಳ ದಡದಲ್ಲಿ ವಾಸಿಸುವ ನಿವಾಸಿಗಳು ಸುರಕ್ಷಿತ ಪ್ರದೇಶಗಳಿಗೆ ತೆರಳುವಂತೆ ಅಧಿಕಾರಿಗಳು ಒತ್ತಾಯಿಸಿದ್ದಾರೆ. ಅಲ್ಲದೆ, ಹುಕ್ಕೇರಿ ತಾಲ್ಲೂಕಿನಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.

error: Content is protected !!
Scroll to Top