(ನ್ಯೂಸ್ ಕಡಬ) newskadaba.com ಮೈಸೂರು, ಆ. 19. ದಸರಾ ಉತ್ಸವದ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿ ವೇಳೆ ಅರಮನೆ ಆವರಣದಲ್ಲಿ ಗೊಂದಲವನ್ನು ತಡೆಗಟ್ಟಲು ಮುಂದಾಗಿರುವ ಜಿಲ್ಲಾಡಳಿತ, ಈ ಬಾರಿ 11,600 ಆಸನಗಳ ಕಡಿತಕ್ಕೆ ಮುಂದಾಗಿದೆ.
ಹೌದು, ಕಳೆದ ಬಾರಿ 59 ಸಾವಿರ ಆಸನಗಳ ವ್ಯವಸ್ಥೆ ಕಲ್ಪಿಸಲಾಗಿತ್ತು. ಆದರೆ ಈ ಬಾರಿ ಆಸನಗಳ ಸಂಖ್ಯೆ 48 ಸಾವಿರದ ಆಸುಪಾಸಿನಲ್ಲಿ ಇರಲಿದೆ ಎನ್ನಲಾಗಿದೆ.
ಕಳೆದ ಎರಡು ತಿಂಗಳ ಹಿಂದೆಯಷ್ಟೇ ಆರ್ಸಿಬಿ ವಿಜಯೋತ್ಸವದ ವೇಳೆ ನಡೆದ ಕಾಲ್ತುಳಿತ ಅವಘಡದಿಂದ ಎಚ್ಚೆತ್ತಿರುವ ಸರಕಾರ ದಸರಾದಲ್ಲೂ ಎಚ್ಚರಿಕೆಯ ಹೆಜ್ಜೆಯನ್ನಿಡಲು ಮುಂದಾಗಿದೆ.
ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ಮೇರೆಗೆ ಈ ಬಾರಿ ಅರಮನೆ ಆವರಣದಲ್ಲಿ ಆಸನದ ವ್ಯವಸ್ಥೆ ಕಲ್ಪಿಸುವಾಗ ವಿವಿಐಪಿ, ವಿಐಪಿ ಆಸನಗಳು ಸಹಿತ ಎಲ್ಲ ರೀತಿಯ ಪಾಸ್ಗಳ ಪ್ರಮಾಣ ಇಳಿಕೆಯಾಗಲಿದೆ. ಅರಮನೆ ಆವರಣದಲ್ಲಿ ಹಂಚಿಕೆ ಮಾಡುವ ಪಾಸ್ಗಳಿಗಷ್ಟೇ ಆಸನ ವ್ಯವಸ್ಥೆ ಮಾಡಿಸಿ ಯಾವುದೇ ಗೊಂದಲ ಇಲ್ಲದಂತೆ ಅಚ್ಚುಕಟ್ಟಾಗಿ ನೋಡಿಕೊಳ್ಳಲು ಅಗತ್ಯ ಕ್ರಮಕ್ಕೆ ಮುಂದಾಗಿದೆ













