(ನ್ಯೂಸ್ ಕಡಬ) newskadaba.com ಕಡಬ, ಎ.15. ಭಾನುವಾರ ಸಂಜೆ ಕಡಬ ಪರಿಸರದಲ್ಲಿ ಗುಡುಗು ಸಹಿತ ಭಾರೀ ಗಾಳಿ ಮಳೆಯಾಗಿದ್ದು, ಮರ್ಧಾಳ ಸರಕಾರಿ ಶಾಲೆಯ ಆವರಣ ಗೋಡೆಯು ಕುಸಿದಿದೆ.
ಮರ್ಧಾಳ ಬಂಟ್ರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆಟದ ಮೈದಾನದ ಸುತ್ತಲೂ ಮರ್ಧಾಳ ಗ್ರಾಮ ಪಂಚಾಯತ್ ಉದ್ಯೋಗ ಖಾತರಿ ಯೋಜನೆಯಡಿ ಸುಮಾರು ಮೂರು ಲಕ್ಷದಷ್ಟು ಅನುದಾನದಲ್ಲಿ ಇತ್ತೀಚೆಗಷ್ಟೇ ಕೆಂಪುಕಲ್ಲಿನ ಆವರಣ ಗೋಡೆ ನಿರ್ಮಿಸಲಾಗಿತ್ತು. ಭಾನುವಾರದಂದು ಸುರಿದ ಭಾರೀ ಗಾಳಿ ಮಳೆಗೆ ಆವರಣ ಗೋಡೆ ಬಿರುಕು ಬಿಟ್ಟು ಕುಸಿದು ಬಿದ್ದಿದೆ. ಆವರಣ ಗೋಡೆಯ ಪಕ್ಕದಲ್ಲೇ ಮನೆಯಿದ್ದು, ಆವರಣ ಗೋಡೆಯ ಕಲ್ಲುಗಳು ಮನೆಯ ಆವರಣಕ್ಕೆ ಬಿದ್ದಿದ್ದು, ಸಂಭಾವ್ಯ ಅಪಾಯ ತಪ್ಪಿದೆ.
ಪರಿಸರದ ಸುಬ್ರಹ್ಮಣ್ಯ, ಕೈಕಂಬ, ಬಿಳಿನೆಲೆ, ನೆಟ್ಟಣ, ಮರ್ಧಾಳ, ಕೊಣಾಜೆ, ಕೋಡಿಂಬಾಳ, ಪಂಜ, ಇಚಿಲಂಪಾಡಿ, ನೆಲ್ಯಾಡಿ, ಹೊಸ್ಮಠ, ಬಲ್ಯ, ಕುಂತೂರು, ಆಲಂಕಾರು ಸೇರಿದಂತೆ ಹಲವೆಡೆ ಗುಡುಗು ಸಹಿತ ಧಾರಾಕಾರ ಮಳೆಯಾಗಿದ್ದು, ಕೆಲವೆಡೆ ತುಂತುರು ಮಳೆಯಾಗಿದೆ. ವಿದ್ಯುತ್ ಕೈಕೊಟ್ಟಿದ್ದರಿಂದಾಗಿ ಜನತೆ ಕತ್ತಲಲ್ಲಿ ಕಾಲ ಕಳೆಯುವಂತಾಗಿದ್ದು, ದೂರವಾಣಿ ಸಂಪರ್ಕ ಕಡಿತಗೊಂಡಿದೆ. ಸುಬ್ರಹ್ಮಣ್ಯದ ಬಳ್ಪ, ಗುತ್ತಿಗಾರು ಸೇರಿದಂತೆ ವಿವಿಧೆಡೆ ಭಾನುವಾರ ಬೆಳಗ್ಗಿನ ಜಾವ ಬಹುತೇಕ ಮಳೆಯಾಗಿತ್ತು. ಕಡಬ ಪರಿಸರದಲ್ಲಿ ಶನಿವಾರ ರಾತ್ರಿಯೂ ಮಳೆಯಾಗಿದ್ದು, ಬಿಸಿಲಿನ ಬೇಗೆಯಿಂದಿದ್ದ ಭೂಮಿಗೆ ತಂಪೆರೆದಿದೆ.