(ನ್ಯೂಸ್ ಕಡಬ) newskadaba.com ಮಂಗಳೂರು, ಎ.15. ಇತ್ತೀಚೆಗೆ ಎಂಟು ಮಂದಿ ನರ ರಾಕ್ಷಸರು ಜಮ್ಮು ಕಾಶ್ಮೀರದ ಕಥುವಾದ ಎಂಟು ವರ್ಷದ ಬಾಲಕಿಯನ್ನು ಕ್ರೂರವಾಗಿ ಅತ್ಯಾಚಾರ ನಡೆಸಿದ್ದಲ್ಲದೆ ಬರ್ಬರವಾಗಿ ಹತ್ಯೆಗೈದ ಪ್ರಕರಣವನ್ನು ಖಂಡಿಸಿ ಮಂಗಳೂರಿನ ವಿವಿಧ ಸಮಾನ ಮನಸ್ಕ ಸಂಘಟನೆಗಳ ವತಿಯಿಂದ ಎಪ್ರಿಲ್ 16 ರಂದು ಸಂಜೆ 06.30 ಕ್ಕೆ ಜಿಲ್ಲಾಧಿಕಾರಿ ಕಚೇರಿ ಎದುರು ಮೊಂಬತ್ತಿ ಸ್ಮರಣೆ ಕಾರ್ಯಕ್ರಮ ನಡೆಯಲಿದೆ.
ಈ ಬಗ್ಗೆ ಸಮಾನ ಮನಸ್ಕರ ಸಭೆಯನ್ನುದ್ದೇಶಿಸಿ ಸಾಮಾಜಿಕ ಕಾರ್ಯಕರ್ತರಾದ ವಿದ್ಯಾ ದಿನಕರ್, ಸೈಫ್ ಸುಲ್ತಾನ್, ರಾಷ್ಟ್ರೀಯ ವಿಚಾರವಾದಿ ವೇದಿಕೆಯ ಅಧ್ಯಕ್ಷ ನರೇಂದ್ರ ನಾಯಕ್ ಸೇರಿದಂತೆ ವಿವಿಧ ಮುಖಂಡರು ಮಾತನಾಡಿ, ಜಮ್ಮು ಕಾಶ್ಮೀರದ ಕಥುವಾದಲ್ಲಿ ನಡೆದ ಆಸಿಫಾ ಎಂಬ ಬಾಲಕಿಯನ್ನು ಕ್ರೂರವಾಗಿ ಅತ್ಯಾಚಾರ ಗೈದು ಹತ್ಯೆ ಮಾಡಲಾಗಿದ್ದು, ವಿಶ್ವವೇ ತಲೆ ತಗ್ಗಿಸುವಂತಾಗಿದೆ. ದೇಶದ ಯಾವುದೇ ಪ್ರದೇಶದಲ್ಲಿ ಮಹಿಳೆಯರ, ಮಕ್ಕಳ, ದುರ್ಬಲರ ಮೇಲೆ ನಡೆಯುತ್ತಿರುವ ಅತ್ಯಾಚಾರವೆಂಬ ವಿಕೃತಿಯನ್ನು ಸಮಾಜದಿಂದಲೇ ಸಂಪೂರ್ಣವಾಗಿ ದೂರ ಮಾಡುವುದು ನಮ್ಮ ಗುರಿಯಾಗಬೇಕಾಗಿದೆ. ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತೆಯರಿಗೆ ಎಲ್ಲಾ ರೀತಿಯ ನೆರವು ಸಮಾಜದಿಂದ ದೊರಕಬೇಕಾಗಿದೆ. ಅವರನ್ನು ಸಮಾಜ ಕೆಟ್ಟ ದೃಷ್ಟಿಯಿಂದ ನೋಡಬಾರದು ಬದಲಾಗಿ ಅತ್ಯಾಚಾರ ಮಾಡುವ ವ್ಯಕ್ತಿಗಳಿಗೆ ಬದುಕಿನಲ್ಲಿ ಮರೆಯಲಾರದಂತಹ ಶಿಕ್ಷೆಯಾಗಬೇಕಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಾಷ್ಟ್ರಿಯ ಹೆದ್ದಾರಿಯ ಬಳಿ ಹಾಡುಹಗಲೆ ಬಾಲಕಿ ಸೌಜನ್ಯ ಮೇಲೆ ಅತ್ಯಾಚಾರ ನಡೆದು ಕೊಲೆ ಮಾಡಿರುವ ಘಟನೆಯೂ ಅತ್ಯಂತ ಗಂಭೀರವಾದುದು ಈ ಪ್ರಕರಣದಲ್ಲಿ ಇದುವರೆಗೆ ನೈಜ ಆರೋಪಿಗಳಿಗೆ ಶಿಕ್ಷೆಯಾಗಿಲ್ಲ. ಕಥುವಾದಲ್ಲೂ ಬಾಲಕಿಯ ಮೇಲೆ ಅತ್ಯಾಚಾರ ನಡೆದಿರುವುದನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ. ಈ ರೀತಿಯ ಅತ್ಯಾಚಾರ ಪ್ರಕರಣ ವಿರುದ್ಧ ದೇಶಾದ್ಯಂತ ಪ್ರತಿಭಟನೆ ನಡೆಯಬೇಕಾಗಿದೆ ಎಂದರು.
ಕಥುವಾ ಅತ್ಯಾಚಾರ ಪ್ರಕರಣದ ಹಿನ್ನೆಲೆಯಲ್ಲಿ ರಾಜಕೀಯ ರಹಿತವಾಗಿ ಸಮಾನ ಮನಸ್ಕರ ಸಂಘಟನೆಯಿಂದ ಎಪ್ರಿಲ್ 16 ರಂದು ದ.ಕ. ಜಿಲ್ಲಾಧಿಕಾರಿ ಕಚೇರಿಯ ಎದುರು ಸಾಂಕೇತಿಕ ಪ್ರತಿಭಟನೆಯನ್ನು ಮಂಗಳೂರು ನಾಗರಿಕರ ವತಿಯಿಂದ ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ನಡೆಯಲಿದೆ ಎಂದರು.