(ನ್ಯೂಸ್ ಕಡಬ) newskadaba.com ಬಿ.ಸಿ.ರೋಡ್, ಜು.05. ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳ ತಂಡವೊಂದು ಯುವಕನೋರ್ವನಿಗೆ ಮಾರಕಾಸ್ತ್ರದಿಂದ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಬಿ.ಸಿ.ರೋಡಿನಲ್ಲಿ ಮಂಗಳವಾರ ರಾತ್ರಿ 10 ಗಂಟೆಯ ಸುಮಾರಿಗೆ ನಡೆದಿದೆ.
ಬಿ.ಸಿ.ರೋಡ್ ಉದಯ ಲಾಂಡ್ರಿ ಮಾಲಕ, ಸಜಿಪ ಮುನ್ನೂರು ಗ್ರಾಮದ ಕಂದೂರು ನಿವಾಸಿ ತನಿಯಪ್ಪ ಎಂಬವರ ಪುತ್ರ ಶರತ್ (30) ದಾಳಿಯಿಂದ ಗಂಭೀರ ಗಾಯಗೊಂಡಿರುವ ಯುವಕ ಎಂದು ಗುರುತಿಸಲಾಗಿದೆ.
ತುಂಬೆ ಖಾಸಗಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ.
ಹೆಲ್ಮೇಟ್ ಧರಿಸಿಕೊಂಡು ಬೈಕ್‌ನಲ್ಲಿ ಬಂದಿರುವ ದುಷ್ಕರ್ಮಿಗಳು ಶರತ್ ಅಂಗಡಿಯಿಂದ ಹೊರಬರುತ್ತಿದ್ದ ವೇಳೆ ದಾಳಿ ನಡೆಸಿ ಪರಾರಿಯಾಗಿದ್ದು, ತಲೆಗೆ ಗಂಭೀರ ಏಟು ಬಿದ್ದಿದೆ ಎಂದು ತಿಳಿದು ಬಂದಿದೆ.
ತಾಲೂಕಿನಲ್ಲಿ ಸೆಕ್ಷನ್ 144 ಅಡಿಯಲ್ಲಿ ನಿಷೇಧಾಜ್ಷೆ ಜಾರಿಯಲ್ಲಿದ್ದು ಬಿ.ಸಿ.ರೋಡ್ ಸಹಿತ ತಾಲೂಕಿನಲ್ಲಿ ಬಿಗಿ ಪೊಲೀಸ್ ಬಂದೋ ಬಸ್ತ್ ನಿಯೋಜಿಸಲಾಗಿದೆ. ಈ ನಡುವೆಯೂ ಹಲ್ಲೆ ಘಟನೆ ನಡೆದಿರುವುದು ಆತಂಕಕ್ಕೆ ಕಾರಣವಾಗಿದೆ.
ಘಟನೆ ನಡೆದ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಧೀರ್ ಕುಮಾರ್ ರೆಡ್ಡಿ, ಎಎಸ್ಪಿ ವಿಷ್ಣುವರ್ಧನ್, ಡಿವೈಎಸ್ಪಿ ರವೀಶ್ ಸಿ.ಆರ್. ಸಹಿತ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.