ನಕ್ಸಲ್ ಸೂಕ್ಷ್ಮ ಪ್ರದೇಶವಾದ ಬಿಳಿನೆಲೆ, ಕೈಕಂಬಗಳಿಗೆ ಜಿಲ್ಲಾಧಿಕಾರಿ, ಎಸ್ಪಿ ಭೇಟಿ ► ಸಾರ್ವಜನಿಕರೊಂದಿಗೆ ಸಂವಾದ

(ನ್ಯೂಸ್ ಕಡಬ) newskadaba.com ಕಡಬ, ಎ.13. ನಕ್ಸಲ್ ಸೂಕ್ಷ್ಮ ಪ್ರದೇಶವಾದ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ವಿವಿಧೆಡೆಯ ಗ್ರಾಮೀಣ ಪ್ರದೇಶಗಳ ಮತಗಟ್ಟೆಗಳಿಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರು ಶುಕ್ರವಾರದಂದು ಜಂಟಿಯಾಗಿ ಭೇಟಿ ನೀಡಿ ಸಾರ್ವಜನಿಕರೊಂದಿಗೆ ಸಂವಾದ ನಡೆಸಿದರು.

ನಕ್ಸಲ್ ಸೂಕ್ಷ್ಮ ಪ್ರದೇಶಗಳಾದ ಕೊಣಾಜೆ, ಕೊಂಬಾರು, ಬಿಳಿನೆಲೆ ಹಾಗೂ ಕೈಕಂಬ ಮತಗಟ್ಟೆಗಳಿಗೆ‌ ಭೇಟಿ‌ ನೀಡಿ ಮಾತನಾಡಿದ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್, ಮುಂಬರುವ ವಿಧಾನಸಭಾ ಚುನಾವಣೆಯು ಸುಗಮ ರೀತಿಯಲ್ಲಿ ನಡೆಯಲು ಸರ್ವ ಸಿದ್ಧತೆಗಳನ್ನು ಏರ್ಪಡಿಸಲಾಗಿದೆ. ಏನಾದರೂ ಸಮಸ್ಯೆಗಳಿದ್ದಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಬಹುದಾಗಿದೆ. ಯಾವುದೇ ಆಮಿಷಗಳಿಗೆ ಒಳಗಾಗದೆ, ಮುಕ್ತವಾಗಿ ಧೈರ್ಯವಾಗಿ ಮತದಾನದ ಹಕ್ಕನ್ನು ಚಲಾಯಿಸಬೇಕಾಗಿ ಕರೆ ನೀಡಿದರು. ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಆರ್. ರವಿಕಾಂತೇಗೌಡ ಮಾತನಾಡಿ, ಕೆಲವು ವರ್ಷಗಳ ಹಿಂದೆ ಈ ಪರಿಸರಕ್ಕೆ ನಕ್ಸಲರು ಭೇಟಿ‌ ನೀಡಿದ್ದ ಹಿನ್ನೆಲೆಯಲ್ಲಿ ಈ ಪ್ರದೇಶವನ್ನು ನಕ್ಸಲ್ ಸೂಕ್ಷ್ಮಾಣು ಪ್ರದೇಶ ಎಂದು ಗುರುತಿಸಲಾಗಿದೆ. ಇಲ್ಲಿ ಸಾರ್ವಜನಿಕರಿಗೆ ಏನೇ ತೊಂದರೆ ಎದುರಾದರೂ ಎದುರಿಸಲು ಪೊಲೀಸ್ ಇಲಾಖೆಯು ಸನ್ನದ್ಧವಾಗಿದೆ. ಸಾರ್ವಜನಿಕರು ಯಾವುದೇ ಭಯ ಪಡುವ ಅಗತ್ಯವಿಲ್ಲ. ಜಿಲ್ಲೆಯ 24 ಕಡೆಗಳಲ್ಲಿ ಚೆಕ್ ಪೋಸ್ಟ್ ಗಳನ್ನು ನಿರ್ಮಿಸಿ ಕ್ರಿಮಿನಲ್ ಗಳನ್ನು ಮಟ್ಟ ಹಾಕಲು ಕ್ರಮ ಕೈಗೊಳ್ಳಲಾಗಿದೆ ಎಂದರು. ಮಳೆಗಾಲ ಆರಂಭವಾದರೆ ಹಾಲುಮಡ್ಡಿ ಮರಗಳು ರಸ್ತೆಗುರುಳಿ ಪದೇ ಪದೇ ವಿದ್ಯುತ್ ಕೈಕೊಡುತ್ತದೆ ಎನ್ನುವ ಬಗ್ಗೆ ಸಾರ್ವಜನಿಕರು ಜಿಲ್ಲಾಧಿಕಾರಿಯವರ ಗಮನಕ್ಕೆ ತಂದರು. ಈ ಬಗ್ಗೆ ಉತ್ತರಿಸಿದ ಜಿಲ್ಲಾಧಿಕಾರಿಯವರು ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚಿಸಿ ಸಮಸ್ಯೆಯನ್ನು ಪರಿಹರಿಸಲಾಗುವುದು ಎಂದರು.

ವೇದಿಕೆಯಲ್ಲಿ ಪುತ್ತೂರು ಡಿವೈಎಸ್ಪಿ ಶ್ರೀನಿವಾಸ್ ಉಪಸ್ಥಿತರಿದ್ದರು.

error: Content is protected !!

Join the Group

Join WhatsApp Group