ರಾಜ್ಯಕ್ಕೆ ಕಾಲಿಟ್ಟ ಕುಖ್ಯಾತ ವಂಚಕರ ಮೂರು ತಂಡ ► ಆಣೆ, ಪ್ರಮಾಣದ ನೆಪದಲ್ಲಿ ಚಿನ್ನಾಭರಣ ಲೂಟಿ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜು.04. ಆಧುನಿಕ ಯುಗದಲ್ಲಿ ನಾವೆಷ್ಟೇ ಜಾಗೃತರಾಗಿದ್ದರೂ ಸಾಕಾಗುವುದಿಲ್ಲ. ನಮ್ಮ ಪಾಡಿಗೆ ನಾವು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದರೆ ಯಾವುದೇ ಕ್ಷಣದಲ್ಲಿ ಮಹಿಳೆಯೊಬ್ಬಳು ಎದುರಾಗಬಹುದು. ಎಹುರಿಗೆ ಸಿಕ್ಕವಳು ನಿಮ್ಮ ಪರ್ಸ್ ಬಿದ್ದಿದೆ. ತೆಗೆದುಕೊಳ್ಳಿ ಎಂದು ಪರ್ಸನ್ನು ನೆಲದಿಂದ ಎತ್ತಿ ಕೊಡಬಹುದು. ಏನಾಗುತ್ತಿದೆ ಎಂದು ತಿಳಿಯುವಷ್ಟರಲ್ಲಿ ಇನ್ನೋರ್ವ ಮಹಿಳೆ ಎದುರಾಗಿ ನನ್ನ ಪರ್ಸನ್ನು ನೀನು ಕದ್ದಿದ್ದೀಯಾ… ಇಲ್ಲಾಂದ್ರೆ ನನ್ನ ಪರ್ಸ್ ನಿನ್ನ ಕೈಗೆ ಹೇಗೆ ಬಂತು ಎಂದು ನಮ್ಮನ್ನೇ ಇಕ್ಕಟ್ಟಿಗೆ ಸಿಲುಕಿಸುತ್ತಾಳೆ. ಆ ಸಂದರ್ಭದಲ್ಲಿ ಮತ್ತೆ ಕೆಲವರು ನಮ್ಮನ್ನು ಸುತ್ತುವರಿಯುತ್ತಾರೆ. ಜನ ಸೇರುವುದರಿಂದ ಹೆದರುವ ನಾವು ನಮಗಾಗುವ ಮುಜುಗರದಿಂದಾಗಿ ಒಂದಷ್ಟು ಒದ್ದಾಡಿ ಕೊನೆಗೆ ಅವರಿಂದ ತಪ್ಪಿಸಲು ಹೆಣಗಾಡುತ್ತೇವೆ. ಆ ಸಮಯದಲ್ಲಿ ಪರ್ಸಿನ ಒಡತಿಯೆಂದು ಪರಿಚಯಿಸಿಕೊಂಡಾಕೆ ಆಣೆ, ಪ್ರಮಾಣದ ನಾಟಕವಾಡಿ ನಮ್ಮನ್ನು ಯಾಮಾರಿಸುತ್ತಾಳೆ. ಕ್ಷಣಾರ್ಧದಲ್ಲಿ ನಮ್ಮ ಮೈಮೇಲಿನ ಚಿನ್ನಾಭರಣಗಳನ್ನು ದೋಚಿಕೊಂಡು ಒಬ್ಬೊಬ್ಬರಾಗಿ ಸ್ಥಳದಿಂದ ಕಾಲ್ಕಿತ್ತು ಪರಾರಿಯಾಗುತ್ತಾರೆ. ಇದು ರಾಜ್ಯಕ್ಕೆ ಕಾಲಿಟ್ಟ ನೂತನ ಮೂರು ಪ್ರತ್ಯೇಕ ನಟೋರಿಯಸ್ ವಂಚಕ ತಂಡದ ಕೃತ್ಯದ ಶೈಲಿ.

ಅಮಾಯಕ ಮಹಿಳೆಯರು, ವೃದ್ಧರು ಹಾಗೂ ಅಸಹಾಯಕರನ್ನೇ ಟಾರ್ಗೆಟ್ ಮಾಡುವ ಈ ತಂಡವು ಅಂತಹವರನ್ನೇ ಬಲೆಗೆ ಹಾಕುತ್ತವೆ. ಪರ್ಸ್ ಕಳ್ಳತನದ ಆರೋಪ ಹಾಕುವ ವಂಚಕರು ನೀವು ಅಷ್ಟೊಂದು ಪ್ರಾಮಾಣಿಕರಾಗಿದ್ದಲ್ಲಿ ಮಾಂಗಲ್ಯ ಸರ ಹಿಡಿದು ಪ್ರಮಾಣ ಮಾಡುವಂತೆ ಹೇಳಿ ಆಭರಣಗಳನ್ನು ಪಡೆದುಕೊಳ್ಳುತ್ತಾರೆ. ನೀವು ಮುಜುಗರದಿಂದ ಪಾರಾಗುವ ಸಲುವಾಗಿ ಮಾಂಗಲ್ಯ ಸರವನ್ನು ಕತ್ತಿನಿಂದ ತೆಗೆದೀರೋ… ಆಭರಣಗಳನ್ನು ದೋಚಿ ನಿಮ್ಮ ಕಣ್ಣೆದುರೇ ನಿಮ್ಮ ಕೈಗೆ ಕಲ್ಲು ಅಥವಾ ಮಣ್ಣನ್ನು ಪೇಪರ್ ನಲ್ಲಿ ಸುತ್ತಿ ಜಾಗ್ರತೆಯಾಗಿ ತೆಗೆದಿಟ್ಟುಕೊಳ್ಳುವಂತೆ ಸೂಚಿಸಿ ಆ ಕ್ಷಣದಲ್ಲೇ ಪರಾರಿಯಾಗುತ್ತಾರೆ. ನಾವು ಪೇಪರನ್ನು ಬಿಚ್ಚಿದಾಗ ಮೋಸ ಹೋಗಿರುವುದು ಕಂಡುಬರುತ್ತದೆ. ಆಂಧ್ರದ ಚಿತ್ತೂರು ಜಿಲ್ಲೆಯ ಓಜಕುಪ್ಪಂ ತಂಡ, ಇರಾನಿ ಗ್ಯಾಂಗ್ ಹಾಗೂ ತಮಿಳುನಾಡಿನ ತಿರುಚ್ಚಿ ಜಿಲ್ಲೆಯ ರಾಂಜೀ ನಗರ ತಂಡಗಳು ಈಗಾಗಲೇ ಕರ್ನಾಟಕದ ವಿವಿಧೆಡೆ ಕಾಲಿಟ್ಟಿದ್ದು, ಜನರನ್ನು ಮೋಸ ಮಾಡಿ ಪರಾರಿಯಾಗುತ್ತಿದೆ.

Also Read  ಸರಳವಾಸ್ತು ತಜ್ಞ ಚಂದ್ರಶೇಖರ ಗುರೂಜಿ ಹತ್ಯೆ ಪ್ರಕರಣ ➤ ಆರೋಪಿಗಳ ಬಂಧನ

ಜೂನ್ 2017ರಲ್ಲಿ ಬೆಂಗಳೂರಿನಲ್ಲಿ ಇಂತಹದೇ 2 ಘಟನೆಗಳು ಸಂಭವಿಸಿವೆ. ಜೂ.10ರಂದು ಅಪರಾಹ್ನ 3 ಗಂಟೆ ಸುಮಾರಿಗೆ ಜ್ಞಾನಭಾರತಿ ಮಾರುತಿಕೃಪಾಮುಖ್ಯರಸ್ತೆಯ ವೆಂಕಟಲಕ್ಷ್ಮಮ್ಮ(70) ಇವರ ಗುಂಪಿಗೆ ಸಿಲುಕಿ 20 ಗ್ರಾಂ. ಚಿನ್ನವನ್ನು ಕಳೆದುಕೊಂಡಿದ್ದರು. ಜೂ.29 ರಂದು ಮಧ್ಯಾಹ್ನ ಬೇಂದ್ರೆ ನಗರದ ಲಕ್ಷ್ಮಮ್ಮ(60) ಎಂಬವರನ್ನು ಯಾಮಾರಿಸಿ 30 ಗ್ರಾಣ. ಚಿನ್ನಾಭರಣವನ್ನು ದೋಚಿದ್ದಾರೆ.

Also Read  ಯುವನಿಧಿ- ನಿರುದ್ಯೋಗಿಗಳಿಂದ ಅರ್ಜಿ ಆಹ್ವಾನ

ನಮ್ಮನ್ನು ಹೇಗೆ ಯಾಮಾರಿಸುತ್ತಾರೆ…?

* ನಮ್ಮದಲ್ಲದ ವಸ್ತುಗಳನ್ನು ಕೈಗೆ ನೀಡಿ ಆಣೆ ಪ್ರಮಾಣದ ನೆಪದಲ್ಲಿ ದರೋಡೆ ನಡೆದುತ್ತಾರೆ.
* ವಾಹನದ ಪೆಟ್ರೋಲ್, ಆಯಿಲ್ ಸೋರಿಕೆಯಾಗುತ್ತಿದೆ ಎಂದು ಯಾಮಾರಿಸುತ್ತಾರೆ.
* ರಸ್ತೆ ಮೇಲೆ ಹಣ ಬೀಳಿಸಿ ಗಮನ ಬೇರೆಡೆಗೆ ಸೆಳೆಯುತ್ತಾರೆ.
* ಬ್ಯಾಂಕ್, ಎಟಿಎಂ ಕೇಂದ್ರಗಳಲ್ಲಿ ಸಹಾಯ ಮಾಡುವ ನೆಪದಲ್ಲಿ ವಂಚಿಸುತ್ತಾರೆ.
* ತಲೆಯಲ್ಲಿ ಅಥವಾ ಬಟ್ಟೆಯಲ್ಲಿ ಗಲೀಜು ಬಿದ್ದಿದೆ ಎಂದು ಯಾಮಾರಿಸುತ್ತಾರೆ.

ಹೇಗೆ ಪಾರಾಗಬಹುದು…?

* ಇಂತಹ ವಂಚಕರು ಎದುರಾದರೆ ಆತಂಕಪಡದೆ ಬೊಬ್ಬೆ ಹೊಡೆದು ಸ್ಥಳೀಯರನ್ನು ಸೇರಿಸಿ.
* ಯಾವುದೇ ಕಾರಣಕ್ಕೂ ಆಭರಣಗಳನ್ನು ಬಿಚ್ಚದೆ ಪೊಲೀಸರನ್ನು ಸ್ಥಳಕ್ಕೆ ಕರೆಸಲು ಪ್ರಯತ್ನಿಸಿ
* ನಿರ್ಜನ ಪ್ರದೇಶದಲ್ಲಿ ನಡೆಯುತ್ತಿರುವಾಗ ಅಪರಿಚಿತರ ಬಗ್ಗೆ ಎಚ್ಚರದಿಂದಿರಿ.

error: Content is protected !!
Scroll to Top